ಬೆಂಗಳೂರು: ಹಿಂದಿನ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ, ಅಸಮರ್ಥ ಸಚಿವರಿಗೆ ಕುಖ್ಯಾತಿ ಹೊಂದಿತ್ತು. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ನೀಡಲು ಹಣವಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ಔಷಧ ಸಿಗುತ್ತಿಲ್ಲ, ಸಿದ್ದರಾಮಯ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿತ್ತು. ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಹಣವಿಲ್ಲ, ಹೀಗಿರುವಾಗ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರ ಘೋಷಣೆ ಕೇವಲ ಬೋಗಸ್ ಅಷ್ಟೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ,
ಕರ್ನಾಟಕದಲ್ಲಿ ಹೊಸ ಡಿ.ಕೆ ಶಿವಕುಮಾರ್ ನೇತೃತ್ವ ಸರ್ಕಾರದಲ್ಲಿ ಬೆಳವಣಿಗೆಯಾಗುವುದಿಲ್ಲ, ಭ್ರಷ್ಟಾಚಾರ ಹೆಚ್ಚಲಿದೆ ಅಷ್ಟೆ, ಅವರು ರಾಹುಲ್ ಗಾಂಧಿಗೆ ಎಟಿಎಂ ಅಷ್ಟೆ ಎಂದರು.
ಎಲ್ಲಾ ಹಳೆಯ ಮುಖಗಳು
ಹೊಸ ಸಚಿವ ಸಂಪುಟದಲ್ಲಿ ಹಳೆಯ ಮುಖಗಳೇ ಕಾಣಿಸುತ್ತಿವೆ. ಜನರು ಹೊಸ ಚೈತನ್ಯ ಮತ್ತು ಹೊಸ ದಿಕ್ಕನ್ನು ನಿರೀಕ್ಷಿಸಿದ್ದರು. ಆದರೆ ಅದೇ ಹಳೆಯ ನಾಯಕರು ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ; ಯಾವುದೇ ಹೊಸ ಮುಖಗಳಿಗೆ ಅವಕಾಶ ಸಿಕ್ಕಿಲ್ಲ. ಇದು ಹೊಸ ವೇಷದಲ್ಲಿರುವ ಹಳೆಯ ಸರ್ಕಾರವಾಗಿದೆ. ಧರ್ಮಸ್ಥಳದ ‘ಮಾಸ್ಕ್ ಮ್ಯಾನ್’ ರೀತಿಯ ಪರಿಸ್ಥಿತಿ ಇದಾಗಿದೆ.
ರಾಜ್ಯದ ಜನರು ಬರಗಾಲದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಸಂಬಂಧಿಸಿದ ಸಾವುಗಳು ವರದಿಯಾಗುತ್ತಿವೆ. ಆಸ್ಪತ್ರೆಗಳ ಗೋಡೆಗಳು ಕುಸಿದು ಜನರು ಮೃತಪಟ್ಟಿದ್ದಾರೆ. ಗುಂಡಿಗಳಿಂದ ಕೂಡಿದ ರಸ್ತೆಗಳು ಇನ್ನೂ ಅಪಘಾತಗಳು ಮತ್ತು ಗಾಯಗಳಿಗೆ ಕಾರಣವಾಗುತ್ತಿವೆ.
ಈ ಸರ್ಕಾರವು ಹೊಸ ಪೋಸ್ಟರ್ ಹೊಂದಿರುವ ಹಳೆಯ ಸಿನಿಮಾದಂತಿದೆ. ಇದರಿಂದ ಯಾವುದೇ ನಿಜವಾದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬದಲಾಗಿರುವುದು ಕೇವಲ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿ ಮಾತ್ರ. ಜನರು ಉತ್ತಮ ಆಡಳಿತವನ್ನು ಬಯಸಿದ್ದರು. ಹೊಸ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿದ್ದವು. ಆದರೆ ಯಾವುದೇ ಹೊಸ ಬದಲಾವಣೆ ಕಾಣುತ್ತಿಲ್ಲ. ಅದೇ ಹಳೆಯ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿರುವ ಮುಖಗಳು ಮತ್ತೆ ಅಧಿಕಾರದಲ್ಲಿವೆ ಎಂದರು.
ಯುವಕರು ಹಾಗೂ ಪಕ್ಷದ ನಡುವೆ ಸಂಪರ್ಕ ಸಾಧಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಭಾರತ್ ಜೋಡೋ ಯುವಕ ಸಂಘ ಕಾಂಗ್ರೆಸ್ ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಕಾಂಗ್ರೆಸ್ ನಿರಾಶ್ರಿತರಿಗೆ ಆಶ್ರಯ ತಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಿ.ಕೆ. ಅಣ್ಣ, ಭಾರತ್ ಜೋಡೋ ಬೇಡ ಮೊದಲು ಕರ್ನಾಟಕ ಜೋಡೋ ಮಾಡಿ. ಭಾರತ ಬಹಳ ದೊಡ್ಡದು ಇದೆ ಎಂದರು.
ನಾನು ಯುವಕರನ್ನು ಜೋಡಣೆ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ. ಹಾಗಾದರೆ ಇಷ್ಟು ದಿನ ಮಾಜಿ ಸಿಎಂ ಸಿದ್ಧರಾಮಯ್ಯ ಯುವಕರನ್ನು ಹಾಳು ಮಾಡಿದ್ದರಾ? ಸಿದ್ದರಾಮಯ್ಯ ಹಾಳು ಮಾಡಿದ್ದರು, ಇದು ಕಾಂಗ್ರೆಸ್ ನಿರುದ್ಯೋಗಿಗಳಿಗೆ ಪಿಂಚಣಿ ಯೋಜನೆ ಎಂದು ಕುಹಕವಾಡಿದರು.
ನೂತನವಾಗಿ ನೇಮಕಾತಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಆದರೆ ನೇಮಕಾತಿಗೆ ಹಣವೇ ಇಲ್ಲ. ಮೂರು ವರ್ಷದಿಂದ ಖೋತಾ ಬಜೆಟ್ ತೆರಿಗೆ ಹಾಕಿ ಜನರ ಜೀವ ಹಿಂಡಿ, ಸಾಯಿಸಿದ್ದಾರೆ. ಇನ್ನು ಎಲ್ಲಿಂದ ನೇಮಕಾತಿ ಮಾಡಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು.
ಈ ಮೊದಲು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಅದಕ್ಕೆ ಹಣವನ್ನೇ ಮೀಸಲಿಟ್ಟಿರಲಿಲ್ಲ. ಹೊಸದಾಗಿ ಘೋಷಣೆ ಮಾಡಿರುವುದು ಪ್ರಚಾರದ ಒಂದು ಭಾಗವೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಆಕ್ಷೇಪಿಸಿದರು.
ಮಹಿಳೆಯರಿಗೆ ಏಕೆ ಪ್ರಾತಿನಿಧ್ಯ ಇಲ್ಲ?
ನೂತನ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಜೊತೆಗೆ ಯಾವುದೇ ಹೊಸ ಮುಖಗಳಿಗೂ ಅವಕಾಶ ಇಲ್ಲ, ಡಿಕೆಶಿ ಬ್ಯಾಂಡ್ ಬಾರಿಸ್ತಿದ್ದವರಿಗೆ ಮಂತ್ರಿಸ್ಥಾನ ಸಿಕ್ಕೇ ಇಲ್ಲ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿನ ರೈತರ ಆತಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಸಾವು, ಬಾಣಂತಿಯರ ಸಾವು, ಆಸ್ಪತ್ರೆ ಗೋಡೆ ಕುಸಿದು ಸಾವು, ಬೆಂಗಳೂರಿನಲ್ಲಿ ಗುಂಡಿಗಳ ರಸ್ತೆ ಇದೆಲ್ಲ ಜನರ ಮನಸ್ಸಲ್ಲಿ ಆರದ ಗಾಯಗಳಾಗಿ ಉಳಿದುಕೊಂಡಿದೆ. ಜನ ಉತ್ತಮ ಆಡಳಿತ ಬೇಕು ಎಂದು ಕೇಳಿದ್ದರು. ಆದರೆ ಉತ್ತಮ ಆಡಳಿತ ಮಾಡದೇ ಕುರ್ಚಿ ಬದಲಾವಣೆ ಮಾಡಿದ್ದಾರೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದರು.