ಬೆಂಗಳೂರು: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಜ್ಯದ ಜನರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶನಿವಾರ ಕರೆ ನೀಡಿದ್ದಾರೆ. ಇದೇ ವೇಳೆ ತಾವು ಶೀಘ್ರದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತಿರುವುದಾಗಿಯೂ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಬದಲಾವಣೆ ಜನರ ಆಕ್ರೋಶದ ಪರಿಣಾಮ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, "ಪ್ರಧಾನಿ ಮೋದಿ ಅವರು ನನಗೆ ಶುಭ ಹಾರೈಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ನಾನು ಗೌರವಯುತವಾಗಿ ಅವರನ್ನು ಭೇಟಿ ಮಾಡುತ್ತೇನೆ. ಅವರು ರಾಜಕೀಯ ಮಾಡಬೇಕಾಗಿಲ್ಲ, ನಾವೂ ರಾಜಕೀಯ ಮಾಡಬೇಕಾಗಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಅಗತ್ಯ ಕೆಲಸಗಳನ್ನು ಮಾಡೋಣ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿರುವ ಬಿಜೆಪಿ, ಕರ್ನಾಟಕದ ಜನರು ಉತ್ತಮ ಆಡಳಿತಕ್ಕಾಗಿ ಮತ ನೀಡಿದ್ದರು. ಆದರೆ. ಅವರಿಗೆ ಸಿಕ್ಕಿರುವುದು ಅಸ್ಥಿರತೆ, ಒಳಜಗಳ ಮತ್ತು ಅಧಿಕಾರಕ್ಕಾಗಿ ನಿರಂತರ ಹೋರಾಟ ಎಂದು ಟೀಕಿಸಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಮುಖ್ಯಮಂತ್ರಿ ಹುದ್ದೆಗಾಗಿ ನಡೆದ ಅಧಿಕಾರದ ಕದನ ಕಾಂಗ್ರೆಸ್‌ನ ನಾಯಕತ್ವದ ಬಿಕ್ಕಟ್ಟನ್ನು ಬಯಲು ಮಾಡಿದೆ ಎಂದು ಆರೋಪಿಸಿದೆ. ರಾಜ್ಯ ನಾಯಕತ್ವದಿಂದ ಹಿಡಿದು ಪಕ್ಷದ ಹೈಕಮಾಂಡ್‌ವರೆಗೆ ನಾಯಕತ್ವದ ಕೊರತೆ ಸ್ಪಷ್ಟವಾಗಿದೆ ಎಂದು ಹೇಳಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ಆರೋಪಗಳು ಕೇಳಿಬಂದರೂ ಕಾಂಗ್ರೆಸ್ ಹೈಕಮಾಂಡ್ ಮೌನವಾಗಿತ್ತು. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಖಾತೆ ಹಂಚಿಕೆ ಕುರಿತ ಅಸಮಾಧಾನ ಮತ್ತು ಸಾರ್ವಜನಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗುತ್ತಿವೆ.
ಕಾಂಗ್ರೆಸ್ ನಾಯಕರಿಗೆ ಜನಪರ ಆಡಳಿತಕ್ಕಿಂತ ಅಧಿಕಾರ, ಹುದ್ದೆ ಮತ್ತು ರಾಜಕೀಯ ಉಳಿವಿನ ಚಿಂತೆಯೇ ಹೆಚ್ಚಾಗಿದೆ. ಆಡಳಿತ ಹಿಂಬದಿಗೆ ಸರಿದಿದ್ದು, ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಈ ಬಿಕ್ಕಟ್ಟಿನ ಸಂದರ್ಭದಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದೆ.