ಬೆಂಗಳೂರು: "ರಾಜಕೀಯದಲ್ಲಿ ಶಾಶ್ವತ ಸ್ನೇಹಿತರು ಅಥವಾ ಶತ್ರುಗಳು ಇರುವುದಿಲ್ಲ" ಎಂಬ ಮಾತಿಗೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರ ಇತ್ತೀಚಿನ ರಾಜಕೀಯ ನಡೆ ಹೊಸ ಉದಾಹರಣೆಯಾಗಿ ಪರಿಣಮಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದವರಾಗಿ ಗುರುತಿಸಿಕೊಂಡಿದ್ದ ಜಮೀರ್ ಅಹ್ಮದ್ ಖಾನ್ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರತ್ತ ಒಲವು ತೋರಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಜೂನ್ 3ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ, ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಪಡಿಸುವಂತೆ ಜಮೀರ್ ತಮ್ಮ ಸಮುದಾಯದವರಿಗೆ ಕರೆ ನೀಡಿರುವ ಆಡಿಯೋ ವೈರಲ್ ಆಗಿತ್ತು. ಈ ಬೆಳವಣಿಗೆಯಿಂದಾಗಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕೈತಪ್ಪಿತ್ತು ಎನ್ನಲಾಗುತ್ತಿದೆ.
ಈ ಬೆಳವಣಿಗೆಯಿಂದ ಬೇಸರಗೊಂಡ ಜಮೀರ್ ಅವರು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಡಿಕೆ ಶಿವಕುಮಾರ್ ಅವರ ಸಹೋದರ ಹಾಗೂ ಆಪ್ತ ನಾಯಕ ಡಿಕೆ.ಸುರೇಶ್ ಅವರು ಮಧ್ಯಪ್ರವೇಶಿಸಿ ಜಮೀರ್ ಅವರನ್ನು ಸಮಾಧಾನಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದೀಗ ಜಮೀರ್ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಡಿಕೆ ಸುರೇಶ್ ಬಲವಾದ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶನಿವಾರ ಜಮೀರ್ ಅವರು ಸದಾಶಿವನಗರದಲ್ಲಿರುವ ಡಿಕೆ ಸಹೋದರರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ತಪ್ಪಿಸಿಕೊಂಡಿರುವ ಜಮೀರ್ ಅವರಿಗೆ ಇದೀಗ ಮುಸ್ಲಿಂ ಸಮುದಾಯದ ಇತರ ಶಾಸಕರಾದ ಸಲೀಂ ಅಹಮದ್, ತನ್ವೀರ್ ಸೇಠ್, ಕನೀಜ್ ಫಾತಿಮಾ ಮತ್ತು ರಿಜ್ವಾನ್ ಅರ್ಷದ್ ಅವರಿಂದಲೂ ಸ್ಪರ್ಧೆ ಎದುರಾಗಿದೆ.
ಹೀಗಾಗಿ ಜಮೀರ್ ಅವರು ತಮ್ಮ ಸಚಿವ ಸ್ಥಾನಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವೇಳೆ ಸಿದ್ದರಾಮಯ್ಯ ಅವರು ಜಿ.ಪರಮೇಶ್ವರ್ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಜಮೀರ್ ಅವರು ಡಿಕೆ ಶಿವಕುಮಾರ್ ಪರವಾಗಿದ್ದರು ಎಂಬ ಮಾಹಿತಿಯೂ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ನಾಯಕತ್ವ ಬದಲಾವಣೆ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಕರೆದಾಗ ಜಮೀರ್ ಅವರನ್ನೂ ಜೊತೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಜಮೀರ್ ಪರವಾಗಿ ಒಲವು ತೋರಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ, ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಜಮೀರ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ರಿಜ್ವಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.