ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ನಡುವೆ, ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಯೋಜನೆಗೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ; ಅಲ್ಲಿನ ರೈತರು ಭೂಮಿ ಕೊಡಲು ಒಪ್ಪಿದ್ದಾರಾ ಇಲ್ಲವಾ ಎಂದು ಸಾರ್ವಜನಿಕವಾಗಿಯೇ ಕೇಳೋಣ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
ಮಾಜಿ ಶಾಸಕ ಮಾಗಡಿ ಮಂಜುನಾಥ್ ಹಾಗೂ ಜೆಡಿಎಸ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ತಮ್ಮ ಅವಧಿಯಲ್ಲಿ ಏನಾಗಿತ್ತು, ಕಾಂಗ್ರೆಸ್ ನಾಯಕರು ಅಂದಿನ ಸದನದಲ್ಲಿ ಏನು ಹೇಳಿದ್ದರು ಮತ್ತು ಈಗಿನ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದರು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಐದು ಕಡೆ ಉಪನಗರ ಯೋಜನೆಗಳನ್ನು ಘೋಷಿಸಿದ್ದು ಸತ್ಯ, ಆದರೆ, ಬಿಡದಿ ಟೌನ್‌ಶಿಪ್ ಯೋಜನೆಗೆ 2007ರಲ್ಲೇ ತೆರೆ ಎಳೆದಿದ್ದೆ. “ಆ ಸಮಯದಲ್ಲಿ ಸದನದಲ್ಲಿ ಇದೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು.
‘ಇದು ಫಲವತ್ತಾದ ಭೂಮಿ, ರೈತರು ಭೂಮಿ ಕೊಡಬಾರದು, ಇದು ರಿಯಲ್ ಎಸ್ಟೇಟ್ ದಂಧೆ’ ಎಂದು ಹೇಳಿದ್ದ ಅವರ ಭಾಷಣಗಳ ಪ್ರತಿಗಳು ನನ್ನ ಬಳಿ ಇವೆ,” ಎಂದು ಹೇಳಿದರು.
ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1ರಂದು ಸದನದಲ್ಲೇ ಬಿಡದಿ ಟೌನ್‌ಶಿಪ್ ಮಾಡುವುದಿಲ್ಲ ಎಂದು ಘೋಷಿಸಿ ಯೋಜನೆಯನ್ನು ಕೈಬಿಟ್ಟಿದ್ದೆ. “ಆ ನಂತರ ಈ ಯೋಜನೆಯಲ್ಲಿ ನನ್ನ ಪಾತ್ರವೇ ಇರಲಿಲ್ಲ. ಈಗ ನನ್ನನ್ನು ಈ ಯೋಜನೆಯ ಪಿತಾಮಹ ಎಂದು ಕರೆಯುವವರು ಇಷ್ಟು ವರ್ಷ ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದ್ದಾರೆ.
“2025ರ ಮಾರ್ಚ್ 12ರಂದು ಈ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಕಾಂಗ್ರೆಸ್ ಸರ್ಕಾರವೇ. ಜೂನ್ 10ರಂದು ಅಂತಿಮ ಅಧಿಸೂಚನೆಯನ್ನೂ ಇದೇ ಸರ್ಕಾರ ಹೊರಡಿಸಿದೆ. ಹಾಗಿದ್ದಾಗ ಇದರಲ್ಲಿ ನನ್ನ ಪಾತ್ರ ಎಲ್ಲಿದೆ? ನನಗೆ ಅಷ್ಟು ಆಸಕ್ತಿ ಇದ್ದಿದ್ದರೆ 2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಯೋಜನೆ ಜಾರಿಗೊಳಿಸಬಹುದಿತ್ತಲ್ಲವೇ?” ಎಂದು ತಿರುಗೇಟು ನೀಡಿದರು.
ಇದೇ ವೇಳೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, “ಈ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿಲ್ಲ. ಬದಲಾಗಿ ನಾಗರಭಾವಿ ಬಳಿಯ ಬಾಡಿಗೆ ಮನೆಯಲ್ಲಿ ಕೆಲವರನ್ನು ಕೂರಿಸಿಕೊಂಡು ಕೆಲಸ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.
4,500ಕ್ಕೂ ಹೆಚ್ಚು ರೈತರು ಭೂಸ್ವಾಧೀನಕ್ಕೆ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ. ಬದಲಾಗಿ ಡಿಸಿ ಕಚೇರಿಗೆ ಕರೆಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, “ಯಾರೋ ನಾಲ್ಕು ಜನರಿಂದ ಬ್ಯಾನರ್ ಹಾಕಿಸಿ ರೈತರು ಜಮೀನು ಕೊಡ್ತಾರೆ ಅನ್ನಿಸಬೇಡಿ. ಡಿ.ಕೆ. ಶಿವಕುಮಾರ್ ಅವರೇ, ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ. ಅಲ್ಲಿನ ಸಣ್ಣ ರೈತರು ಭೂಮಿ ಕೊಡಲು ಸಮ್ಮತಿಸಿದ್ದಾರಾ ಇಲ್ಲವಾ ಅಂತ ಜನರ ಮುಂದೆ ಕೇಳೋಣ,” ಎಂದು ನೇರ ಸವಾಲು ಹಾಕಿದರು.
ಸರ್ಕಾರ ರೈತರಿಗೆ ಆಮಿಷ ಒಡ್ಡುತ್ತಿದೆ. ಶೇ.50ರಷ್ಟು ಹಣ ಕೊಡ್ತೀವಿ, ಅಭಿವೃದ್ಧಿ ಆದ ಮೇಲೆ ಸೈಟ್ ಕೊಡ್ತೀವಿ ಎನ್ನುವುದು ಕೇವಲ ಆಮಿಷ. ನೈಸ್ ಯೋಜನೆಯಲ್ಲಿ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈಗ ಹೊಸ ಯೋಜನೆ ಹೆಸರಲ್ಲಿ ಮತ್ತೊಂದು ಲೂಟಿಗೆ ಸಿದ್ಧತೆ ನಡೆದಿದೆ. ಅಡಿಕೆ, ರೇಷ್ಮೆ ಸೇರಿದಂತೆ ಫಲವತ್ತಾದ ಕೃಷಿ ಭೂಮಿಯನ್ನು ನಾಶಮಾಡಿ ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ವಿರುದ್ಧ ವೈಯಕ್ತಿಕ ಮಟ್ಟದಲ್ಲಿಯೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಅಧಿಕಾರಿಗಳ ಬಳಿ ಮಾಹಿತಿ ಕೇಳುವ ಡಿಕೆಶಿ, ಸತ್ತಿರುವ ವ್ಯಕ್ತಿಯ ಹೆಸರಿನಲ್ಲಿ ಹೆಬ್ಬೆಟ್ಟು ಹಾಕಿ ಡಿ-ನೋಟಿಫಿಕೇಶನ್ ಮಾಡಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ. ರೈತರ ಭೂಮಿ ಉಳಿಸಿದರೆ ಜೈಲಿಗೆ ಹೋಗಲ್ಲ, ಆದರೆ ಅಕ್ರಮ ಎಸಗಿದರೆ ಖಂಡಿತ ಜೈಲಿಗೆ ಹೋಗುತ್ತೀರಿ.
ನಾಗರಬಾವಿಯಲ್ಲಿ ಕಚೇರಿ ಮಾಡಿಕೊಂಡು ಏನೇನು ಮಾಡಿದ್ದೀರಾ ಎಂಬುದು ನಮಗೆ ಗೊತ್ತಿದೆ. ಚುನಾವಣೆ ಗೆಲ್ಲಲು ಹಣ ಲೂಟಿ ಮಾಡಬಹುದು ಎಂದುಕೊಂಡಿದ್ದೀರಿ, ಆದರೆ ಇದಕ್ಕೆ ತಕ್ಕ ಉತ್ತರ ನೀಡುವ ಕಾಲ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ಪಾದಯಾತ್ರೆ ಆರಂಭವಾಗಿದ್ದು, ಸರ್ಕಾರ ಕೂಡಲೇ ರೈತ ವಿರೋಧಿ ಯೋಜನೆಯನ್ನು ಕೈಬಿಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಜೆಡಿಎಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ.