ಆರ್ ಅಶೋಕ್ 
ರಾಜಕೀಯ

MLC ಚುನಾವಣೆ ಅಡ್ಡ ಮತದಾನ: ಪಕ್ಷ ದ್ರೋಹಿಗಳ ವಿರುದ್ಧ ಈಗಾಗಲೇ ಕ್ರಮ ಆರಂಭಿಸಲಾಗಿದೆ- ಆರ್ ಅಶೋಕ್; Video

ಪಕ್ಷದ ಸಂಘಟನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಎಸಗಿದವರ ವಿರುದ್ಧ ಈಗಾಗಲೇ ಕ್ರಮ ಆರಂಭಿಸಲಾಗಿದೆ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಹಿರಿಯ ನಾಯಕ ಆರ್. ಅಶೋಕ್ ಮಂಗಳವಾರ ತಿಳಿಸಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ರಾಜ್ಯದ ಬಿಜೆಪಿ ಹಿರಿಯ ನಾಯಕರು ಮಂಗಳವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ, ಇತ್ತೀಚೆಗೆ ನಡೆದ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಡ್ಡಮತದಾನದ ಕುರಿತು ಮಾಹಿತಿ ನೀಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನವನ್ನು ಗಂಭೀರವಾಗಿ ಪರಿಗಣಿಸಿರುವ ನಿತಿನ್ ನಬಿನ್, ಕಳೆದ ವಾರವೇ ವಿಜಯೇಂದ್ರ ಸೇರಿದಂತೆ ಕರ್ನಾಟಕ ಬಿಜೆಪಿ ಘಟಕದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ಬಿಜೆಪಿ ನಾಯಕರು ಚುನಾವಣೆಯಲ್ಲಿನ ಅಡ್ಡಮತದಾನದ ಕುರಿತು ಲಭ್ಯವಿರುವ ಪ್ರಾಥಮಿಕ ಮಾಹಿತಿಗಳನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ವಿವರವಾಗಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, 'ಅಡ್ಡಮತದಾನ (ಕ್ರಾಸ್ ವೋಟಿಂಗ್) ವಿಚಾರವಾಗಿ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

“ನಾವು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕರ್ನಾಟಕ ಎಂಎಲ್‌ಸಿ ಚುನಾವಣೆಯ ಅಡ್ಡಮತದಾನದ ವಿಷಯದ ಕುರಿತು ಚರ್ಚೆ ನಡೆಸಿದ್ದೇವೆ. ಈ ವಿಚಾರವನ್ನು ತಮ್ಮ ಮೇಲೆಯೇ ಬಿಡುವಂತೆ ಅವರು ನಮಗೆ ತಿಳಿಸಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.

ಪಕ್ಷದ ಸಂಘಟನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ” ಎಂದು ಅಶೋಕ್ ಹೇಳಿದರು.

ಜೂನ್ 18ರಂದು ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಹಲವು ಬಿಜೆಪಿ ಶಾಸಕರು ಅಡ್ಡಮತದಾನ ನಡೆಸಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದುಕೊಂಡಿದೆ. ಇದಕ್ಕೂ ಮುನ್ನ ಇದೇ ದಿನ ಮಾತನಾಡಿದ್ದ ಆರ್. ಅಶೋಕ್, ಅಡ್ಡಮತದಾನ ಅತ್ಯಂತ ಗಂಭೀರ ವಿಷಯವಾಗಿದ್ದು, ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಈ ವಿಷಯವನ್ನು ಪಕ್ಷದ ಕೇಂದ್ರ ನಾಯಕತ್ವದ ಮುಂದಿಡಲಾಗುವುದು ಎಂದು ತಿಳಿಸಿದ್ದರು.

ಏಳು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಐದು ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿಗೆ 64 ಶಾಸಕರ ಬಲವಿದ್ದರೂ, ಪಕ್ಷದ ಇಬ್ಬರು ಅಭ್ಯರ್ಥಿಗಳಿಗೆ ಒಟ್ಟಾರೆ ಕೇವಲ 56 ಮತಗಳು ಮಾತ್ರ ಲಭಿಸಿದ್ದವು. ಇದರಿಂದ ಎಂಟು ಮತಗಳ ಕೊರತೆ ಉಂಟಾಗಿದ್ದು, ಪಕ್ಷದೊಳಗಿನ ಅಡ್ಡಮತದಾನದ ಆರೋಪಗಳಿಗೆ ಕಾರಣವಾಗಿದೆ.

ಹೈಕಮಾಂಡ್ ಫುಲ್ ಗರಂ

ಪಕ್ಷದ ಮೂಲಗಳ ಪ್ರಕಾರ, ಅಡ್ಡಮತದಾನದ ಆರೋಪಗಳ ಬಗ್ಗೆ ಬಿಜೆಪಿ ಕೇಂದ್ರ ನಾಯಕತ್ವ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ದೆಹಲಿಗೆ ಕರೆಸಿ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದೆ.

ಇದೇ ವೇಳೆ, ಬಿಜೆಪಿ ಶಾಸಕಾಂಗ ಪಕ್ಷದ ಸದಸ್ಯರು ನಡೆಸಿರುವ ಅಡ್ಡಮತದಾನದ ಆರೋಪದ ತನಿಖೆಗಾಗಿ ಕರ್ನಾಟಕ ಬಿಜೆಪಿ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಸದಸ್ಯರಾಗಿರುವ ಈ ಸಮಿತಿಗೆ ಜೂನ್ 25ರೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಂದ ಅಡ್ಡಮತದಾನ ನಡೆದಿರುವುದು ವಿಧಾನ ಪರಿಷತ್ ಚುನಾವಣಾ ಫಲಿತಾಂಶಗಳಿಂದ ಬಹಿರಂಗವಾದ ಬಳಿಕ ಈ ವಿವಾದ ಭುಗಿಲೆದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ