ಬೆಂಗಳೂರು:ತಮ್ಮ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ನಡುವೆ ನಡೆದ ಅಧಿಕಾರ ಹಂಚಿಕೆ ಒಪ್ಪಂದ ಬಗ್ಗೆ ನಿನ್ನೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದಾಗ ವರಿಷ್ಠರು ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಹಾಗೂ ನೀವು ಅಧಿಕಾರ ಹಂಚಿಕೆ ಮಾಡಿಕೊಳ್ಳಿ ಎಂದು ಹೈಕಮಾಂಡ್ ಸೂಚಿಸಿತು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಮುಖಸ್ಥರು ನಿನ್ನೆ ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಎಂಎಲ್ ಸಿ ಸಲೀಂ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಸಿಎಂ ಮಾತನಾಡಿದರು. ಈ ವೇಳೆ ಮೊದಲ ಬಾರಿಗೆ ಅಧಿಕಾರ ಹಂಚಿಕೆ ಗುಟ್ಟು ಬಿಚ್ಚಿಟ್ಟಿದ್ದಾರೆ.
ಪಕ್ಷ ಈಗ ಸಿಎಂ ಸ್ಥಾನದಲ್ಲಿ ನನ್ನನ್ನು ಕೂರಿಸಿದೆ. ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಬೆಂಬಲಿಸಲು ನೀವು ಬಂದಿದ್ದೀರಿ. ನಾನು, ಸಲೀಂ, ವಿನಯ್ ಕುಮಾರ್ ಸೊರಕೆ ಎಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದವರು. ನಾವು ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಅವರಿಗೆ ಎಂಎಲ್ ಸಿ ಮಾಡಬಾರದು ಎಂದು ವಿರೋಧವಿತ್ತು. ನಾನೇ ಕರೆದುಕೊಂಡು ಹೋಗಿ ಸ್ಪರ್ಧಿಸುವಂತೆ ಮಾಡಿದೆ. ಅವರು ಬೆಂಗಳೂರಿನಲ್ಲಿ ನಿಂತಿದ್ದರೆ ಯಾವತ್ತೋ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಅವರಿಗೆ ರಾಷ್ಟ್ರ ಮಟ್ಟದಲ್ಲೂ ಅವಕಾಶವಿತ್ತು ಎಂದರು.