ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಳಿ 85 ವಾಚುಗಳು, 700-800 ಎಕರೆ ಜಮೀನಿದೆ. ಅವರ ವಾಚ್‌ಗಳ ಒಟ್ಟು ಮೌಲ್ಯವೇ 10 ರಿಂದ 20 ಕೋಟಿ ರು. ಆಗುತ್ತದೆ. ಇಷ್ಟು ಆಸ್ತಿಯನ್ನು ಅವರು ಬದನೆಕಾಯಿ ಮಾರಿ ಗಳಿಸಿದರೇ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪರಿಶ್ರಮ ನೀಟ್ ಅಕಾಡೆಮಿಗೆ ಸಿಎ ಸೈಟ್ ಮಂಜೂರಾಗಿರುವ ಕುರಿತ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ’ ಎಂದು ಸವಾಲು ಹಾಕಿದ್ದಾರೆ. ನಾವು ಒಬಿಸಿಗಳು, ತುಳಿಸಿಕೊಳ್ಳುವುದಕ್ಕೆ ಅರ್ಹರು ಎಂದು ಅಂದುಕೊಳ್ಳೋಣ.
ಆದರೆ ಒಕ್ಕಲಿಗರು ಬೆಳೆಯುತ್ತಿದ್ದರೆ ಏಕೆ ತುಳಿಯುತ್ತೀರಾ? ಪ್ರಧಾನಿ ಮಗ ಸಿಎಂ ಆಗಬಹುದು, ಮೊಮ್ಮಗ ಎಂಪಿ ಆಗಬಹುದು. ಆದರೆ ಡಿಕೆ ಶಿವಕುಮಾರ್ ರಾಜ್ಯದ ಸಿಎಂ ಆಗಬಾರದೇ? ಎಂದು ಅವರು ಪ್ರಶ್ನಿಸಿದರು.
ಮಗನನನ್ನು ಮೂರು ಸಲ ನಿಲ್ಲಿಸಿದರೂ ಗೆಲ್ಲಿಸಲು ಆಗಿಲ್ಲ, ಆದರೆ ಅನಾಥ ಹುಡುನನನ್ನು ಕಾಂಗ್ರೆಸ್ ಗೆಲ್ಲಿಸಿದೆ. ಇದು ನಮ್ಮ ಪಕ್ಷದ ತಾಕತ್ತು, ನಾನು ರೈತನ ಮಗ . ಕಮಾರಸ್ವಾಮಿ ಅವರ ಬಳಿ 700 - 800 ಎಕರೆ ಜಮೀನಿದೆ, ಇದರ ಸೋರ್ಸ್ ಏನು? ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಬಳಿ 32 ಎಕರೆ ಜಮೀನು ಇದೆ. ಇದಕ್ಕೆ ನೀಡಿದ 32 ಕೋಟಿ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
ಈ ಭೂಮಿಯನ್ನು ಪಂಚೆ ಮಾಡಿ ಖರೀದಿ ಮಾಡಿದ್ರಾ? ತೋಟದ ಮನೆಯಲ್ಲಿ ಬದನೆಕಾಯಿ ಮಾರಾಟ ಮಾಡಿ ಖರೀದಿ ಮಾಡಿದ್ರಾ ಅಥವಾ ಬಳ್ಳಾರಿಯಲ್ಲಿ ಕಿಕ್ ಬ್ಯಾಕ್ ಬಂದಿತ್ತು ಅದರಿಂದ ಖರೀದಿ ಮಾಡಿದ್ರಾ? ಇದಕ್ಕೆ ಉತ್ತರ ಕೊಡಲಿ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ನಾನು ನಿಮ್ಮಂತೆ ಕಿಕ್‌ಬ್ಯಾಕ್, ಪರ್ಸೆಂಟೇಜ್ ತೆಗೆದುಕೊಂಡು ಹಣ ಮಾಡಿಲ್ಲ. ನನ್ನ ಸಂಸ್ಥೆಯ ಸಂಪಾದನೆಗೆ ತೆರಿಗೆ ಕಟ್ಟಿದ್ದೇನೆ. ಪರಿಶ್ರಮ ನೀಟ್ ಅಕಾಡೆಮಿಗೆ ಸಿಎ ನಿವೇಶನ ನೀಡಿರುವ ವಿಚಾರವಾಗಿ ಹೈಕೋರ್ಟ್ ನನಗೆ ಚಾಟಿ ಬೀಸಿಲ್ಲ, ವಿವರಣೆ ಅಷ್ಟೇ ಕೇಳಿದೆ. ಹೈಕೋರ್ಟ್‌ಗೆ ಮಾಹಿತಿ ಕೊಡುತ್ತೇನೆ, ಕೇಸ್ ಗೆಲ್ಲುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 62 ವಾಚ್ ಕಟ್ಟಿದ್ದಾರೆ. 62 ವಾಚ್‌ಗಳ ಪೈಕಿ ಒಂದು ವಾಚ್ ಕನಿಷ್ಠ ಬೆಲೆ 10 ಲಕ್ಷ. ಈ ಪೈಕಿ 75-85 ಲಕ್ಷ ರು. ಆಗಿರಬಹುದು. ಅವರ ಬಳಿ ಇರುವ ವಾಚ್‌ಗಳ ಒಟ್ಟು ಮೌಲ್ಯ 15- 20 ಕೋಟಿ ಆಗುತ್ತದೆ. ಕುಮಾರಸ್ವಾಮಿ ಪಂಚೆ ಒಂದೇ ಸಿಂಪಲ್, ಉಳಿದದ್ದೆಲ್ಲಾ ದುಬಾರಿ ಎಂದು ಪ್ರದೀಪ್ ಈಶ್ವರ್ ಹೇಳಿದರು.