ಬೆಂಗಳೂರು: ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಿಸಿರುವುದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.
ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 60 ರೂ. ಹೆಚ್ಚಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನನಿರ್ವಹಣೆಯ ವೆಚ್ಚ ದುಬಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಏರಿಕೆ ಅನಿವಾರ್ಯ ಕ್ರಮವೇನಲ್ಲ, ಇದು ಶರಣಾಗತಿಯನ್ನೇ ದೇಶದ ಕಾರ್ಯತಂತ್ರವೆಂದು ತಪ್ಪಾಗಿ ತಿಳಿದುಕೊಂಡ ವಿದೇಶಾಂಗ ನೀತಿಯ ಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಮೂಲಕ ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿದ್ದಾರೆ ಮತ್ತು ರಷ್ಯಾ ಹಾಗೂ ಇರಾನ್‌ನಂತಹ ದೇಶಗಳೊಂದಿಗಿನ ಭಾರತದ ದೀರ್ಘಕಾಲೀನ ಇಂಧನ ಸಹಭಾಗಿತ್ವವನ್ನು ಹಾಳುಗೆಡವಿದ್ದಾರೆ.
ಇವು ಹಲವು ದಶಕಗಳಿಂದ ಭಾರತೀಯರಿಗೆ ಇಂಧನ ಸ್ಥಿರತೆಯನ್ನು ಖಾತ್ರಿಪಡಿಸಿದ ರಾಷ್ಟ್ರಗಳು ಎಂಬುದನ್ನು ಪ್ರಧಾನಿಗಳು ಮರೆತಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಂಡಿತ್ ಜವಾಹರಲಾಲ್ ನೆಹರೂರವರ ಪ್ರಕಾರ “ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮವಾಗಿದೆ.” ನೆಹರೂ ಅವರು ಏಳೆಂಟು ದಶಕಗಳ ಹಿಂದೆಯೇ ನೀಡಿದ್ದ ಎಚ್ಚರಿಕೆ ಇಂದು ಅಕ್ಷರಶಃ ಸತ್ಯವಾಗಿದೆ. ರಾಜತಾಂತ್ರಿಕತೆ ಎನ್ನುವುದು ಕಾರ್ಯತಂತ್ರವಾಗದೆ, ಪ್ರದರ್ಶನದ ವಸ್ತುವಾಗಿ ಮಾರ್ಪಟ್ಟಾಗ, ಅದಕ್ಕೆ ಅನಿವಾರ್ಯವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ಬಲಿಯಾಗುತ್ತಾರೆ.
ಇತ್ತೀಚೆಗೆ ತಮ್ಮ ಪುಸ್ತಕದಲ್ಲಿ ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ. ನರವಣೆ ಅವರು, ಭಾರತದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆ ಮತ್ತು ವ್ಯೂಹಾತ್ಮಕ ತಿಳುವಳಿಕೆಯ ಕೊರತೆಯ ಬಗ್ಗೆ ಗಂಭೀರ ಆತಂಕಗಳನ್ನು ಎತ್ತಿದ್ದರು. ಇದು ಪ್ರಧಾನಮಂತ್ರಿಗೆ ರಾಜತಾಂತ್ರಿಕ ನಿಲುವು ಮತ್ತು ಅದರ ಆರ್ಥಿಕ ಪರಿಣಾಮಗಳ ಮೂಲಭೂತ ತಿಳುವಳಿಕೆಯ ಕೊರತೆ ಇದೆ ಎಂಬ ಅನುಮಾನವನ್ನು ಖಚಿತಪಡಿಸುವಂತಿದೆ.
ಭಾರತದ ಇಂದಿನ ವಿದೇಶಾಂಗ ನೀತಿಯ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಫ್‌ಸ್ಟೀನ್ ಫೈಲ್ಸ್‌ನ ಬಗೆಗಿನ ಭಯ ಮತ್ತು ರಾಜತಾಂತ್ರಿಕ ತೀರ್ಮಾನಗಳಲ್ಲಿನ ಅಜ್ಞಾನವನ್ನು ತೋರುತ್ತದೆ. ಪ್ರಧಾನಿಗಳು ತಮ್ಮ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಯಾಕೆ ಬೆಲೆ ತೆರಬೇಕು ಎನ್ನುವುದನ್ನು ತಿಳಿಸಲಿ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಲಿ ಮತ್ತು ರಾಜೀನಾಮೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.