ಡಿಕೆ.ಶಿವಕುಮಾರ್  
ರಾಜಕೀಯ

ಒಡಿಶಾ 'ಕೈ' ಶಾಸಕರಿಗೆ ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನೇತೃತ್ವದಲ್ಲಿ ಎಂಟು ಮಂದಿ ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ ನಲ್ಲಿ ಈ ಶಾಸಕರಿಗೆ ಡಿಕೆ.ಶಿವಕುಮಾರ್ ಅವರು ವ್ಯವಸ್ಥೆ ಮಾಡಿದ್ದಾರೆ.

ಬೆಂಗಳೂರು: ಮಾ.16ರ ರಾಜ್ಯಸಭೆ ಚುನಾವಣೆ ವೇಳೆ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಒಡಿಶಾದ 8 ಮಂದಿ ಶಾಸಕರನ್ನು ಕಾಂಗ್ರೆಸ್ ಕರ್ನಾಟಕಕ್ಕೆ ರವಾನಿಸಿದ್ದು, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಖ್ಯಾತಿಯ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಅತಿಥ್ಯ ಹೊತ್ತುಕೊಂಡಿದ್ದಾರೆ.

ಒಡಿಶಾದಲ್ಲಿ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 4ನೇ ಸ್ಥಾನಕ್ಕೆ ಯಾವ ಪಕ್ಷಕ್ಕೂ ಬಹುಮತವಿಲ್ಲ. ಹೀಗಾಗಿ ಶಾಸಕರ ಖರೀದಿ ನಡೆಯುವ ಭೀತಿ ಶುರುವಾಗಿದೆ.

ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನೇತೃತ್ವದಲ್ಲಿ ಎಂಟು ಮಂದಿ ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ ನಲ್ಲಿ ಈ ಶಾಸಕರಿಗೆ ಡಿಕೆ.ಶಿವಕುಮಾರ್ ಅವರು ವ್ಯವಸ್ಥೆ ಮಾಡಿದ್ದಾರೆ.

ಅಶೋಕ್ ಕುಮಾರ್ ದಾಸ್, ಡಾ.ಸಿ.ಎಸ್. ರಾಜೇನ್ ಎಕ್ಕಾ, ಕದ್ರಕ ಅಪ್ಪಲಸ್ವಾಮಿ, ಮಂಗು ಖಿಲ್ಲಾ, ನೀಲಮಾಧಬ್ ಹಿಕಾಕಾ, ಪಬಿತ್ರ ಸೌಂತ, ಪ್ರಫುಲ್ಲ ಚಂದ್ರ ಪ್ರಧಾನ್ ಮತ್ತು ಸತ್ಯಜೀತ್ ಗೊಮಾಂಗೊ ಸೇರಿದಂತೆ ಇತರರು ಬೆಂಗಳೂರಿಗೆ ಆಗಮಿಸಿದ್ದಾರೆ.

ಈ ನಡುವೆ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂಬ ವಿಚಾರಕ್ಕೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿದ್ದು, ಬಿಜೆಪಿ ನಡೆಸಬಹುದಾದ ‘ಕುದುರೆ ವ್ಯಾಪಾರ’ವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಶಾಸಕರಿಗೆ ಆತಿಥ್ಯ ನೀಡುತ್ತಿರುವವರು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶಾಸಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರಾಯ್ ಅವರಿಗೆ ಬೆಂಬಲ ನೀಡುವಂತೆ ಒತ್ತಡ ಹಾಗೂ ಆಮಿಷಗಳು ನೀಡಲಾಗುತ್ತಿವೆ ಎಂಬ ಮಾಹಿತಿ ಶಾಸಕರು ನೀಡಿದರು ಎಂದು ಹೇಳಿದರು.

ವಿರೋಧ ಪಕ್ಷದಿಂದ ಬೆದರಿಕೆಗಳು ಮತ್ತು ಆಫರ್‌ಗಳು ಬಂದಿವೆ. ಶಾಸಕರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಅವರಿಗೆ ‘ಆಪರೇಷನ್ ಲೋಟಸ್’ ಭಾಗವಾಗಲು ಇಷ್ಟವಿಲ್ಲ. ಸ್ವಇಚ್ಛೆಯಿಂದ ಇಲ್ಲಿ ಬಂದಿದ್ದಾರೆಂದು ತಿಳಿಸಿದರು.

ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ತನ್ನದೇ ಶಾಸಕರ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ.ಶಿವಕುಮಾರ್ ಅವರು, “ಕರ್ನಾಟಕದಲ್ಲಿ ‘ಆಪರೇಷನ್ ಲೋಟಸ್’ ನಡೆಸಿದವರು ಯಾರು?” ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಏತನ್ಮಧ್ಯ ಒಡಿಶಾ ಕಾಂಗ್ರೆಸ್‌ನ ಒಟ್ಟು 14 ಶಾಸಕರ ಪೈಕಿ ಕೇವಲ ಎಂಟು ಮಂದಿ ಮಾತ್ರ ಬೆಂಗಳೂರಿಗೆ ಬಂದಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗುವಂತೆ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಮಚಂದ್ರ ಕದಮ್ ಅವರು ವಿಧಾನಸಭೆ ಅಧಿವೇಶನದ ಕಾರಣದಿಂದ ಭುವನೇಶ್ವರದಲ್ಲೇ ಉಳಿದ ಶಾಸಕರು ಇದ್ದಾರೆ. ಮತ್ತೊಬ್ಬ ಶಾಸಕ ದಾಶರಥಿ ಗೊಮಾಂಗೊ ತಮ್ಮ ಕ್ಷೇತ್ರದಲ್ಲಿದ್ದ ಕಾರಣ ವಿಮಾನ ಮಿಸ್ ಮಾಡಿಕೊಂಡಿದ್ದಾರೆ. ನಂತರ ಬೆಂಗಳೂರಿಗೆ ಹೊರಟಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಲಭ್ಯತೆಯನ್ನು ಅವಲಂಬಿಸಿ ಶಾಸಕರು ಬೆಂಗಳೂರಿನಲ್ಲಿ ಅಥವಾ ನವದೆಹಲಿಯಲ್ಲಿ ಭೇಟಿ ನೀಡಲಿದ್ದಾರೆ. ಎಲ್ಲಾ ಶಾಸಕರು ರಾಜ್ಯಾಧ್ಯಕ್ಷರೊಂದಿಗೆ ಮಾರ್ಚ್ 16 ರಂದು ಮತ ಚಲಾಯಿಸಲು ಭುವನೇಶ್ವರಕ್ಕೆ ಹಿಂತಿರುಗುತ್ತಾರೆಂದು ಹೇಳಿದ್ದಾರೆ.

ಇದೇ ವೇಳೆ ಕಟಕ್–ಬರಾಬತಿ ಕ್ಷೇತ್ರದ ಶಾಸಕಿ ಸೋಫಿಯಾ ಫಿರ್ದೌಸ್ ಅವರು ಈ ಭೇಟಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಶಾಸಕರು ಸ್ಥಳಾಂತರಗೊಂಡಿರುವ ಕುರಿತು ಕೇಳಿದ್ದೇನೆ, ಆದರೆ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲಿಗೂ ಹೋಗುವಂತೆ ನಮಗೆ ಯಾರೂ ಹೇಳಿಲ್ಲ. ನಾವು ನಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಜನರಿಂದ ಆಯ್ಕೆಯಾದ ನಂತರ ನಾನು ಇಲ್ಲಿದ್ದೇನೆ, ನಾನೇಕೆ ಬೇರೆಡೆ ಹೋಗಲಿ ಎಂದು ಪ್ರಶ್ನಿಸಿದರು.

ಹಿರಿಯ ಕಾಂಗ್ರೆಸ್ ಶಾಸಕ ತಾರಾ ಪ್ರಸಾದ್ ಬಹಿನಿಪತಿ ಅವರು ಮಾತನಾಡಿ, ಶಾಸಕರು ಸ್ವಯಂ ಇಚ್ಛೆಯಿಂದಲೇ ಪ್ರಯಾಣಿಸಿದ್ದಾರೆ ಎಂದು ಹೇಳಿದ್ದು, ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಾರನ್ನೂ ಬಲವಂತವಾಗಿ ಕರೆದೊಯ್ದಿಲ್ಲ. ಅವರು ಎರಡು ದಿನಗಳ ಕಾಲ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿಕೊಂಡು ನಂತರ ಹಿಂತಿರುಗುತ್ತಾರೆಂದು ಹೇಳಿದ್ದಾರೆ.

ಏತನ್ಮಧ್ಯೆ ರಾಜ್ಯಸಭೆ ಚುನಾವಣೆ ಮಾರ್ಚ್ 16ರಂದು ನಡೆಯಲಿದ್ದು, ಮತದಾನಕ್ಕೂ ಮುನ್ನ ಎಲ್ಲಾ ಶಾಸಕರು ಮರಳಿ ಭುವನೇಶ್ವರಕ್ಕೆ ಹಿಂತಿರುಗಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT