ಬೀದರ್: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರ್ ಶಿವಶಂಕರಪ್ಪ ಅವರ ಋಣ ತೀರಿಸಲು ಬಿಜೆಪಿ ಡಮ್ಮಿ ಅಭ್ಯರ್ಥಿಯನ್ನು ಉಪ ಚುನಾವಣೆಗೆ ನಿಲ್ಲಿಸಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೀದರ್ ನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೋ ಬಾಯಿ ಚಪಲಕ್ಕೆ ಮೂರ್ಖರು ಮಾತನಾಡುತ್ತಿದ್ದಾರೆ ಎಂದರೆ ಅವರ ಮಾತುಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮತ ಎಣಿಕೆ ಆದ ನಂತರ ಗೊತ್ತಾಗುತ್ತದೆ, ಚಟಕ್ಕೆ, ಚಪಲಕ್ಕೆ ಮಾತನಾಡುವುದು ಬೇರೆ, ನಮ್ಮ ಕಾರ್ಯಕರ್ತರು ಎರಡೂ ಕ್ಷೇತ್ರಗಳ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂದರು.
ದಾವಣಗೆರೆ ಟಿಕೆಟ್ ಜಿಎಂ ಸಿದ್ದೇಶ್ವರ ಅವರ ಬಣದವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಯಡಿಯೂರಪ್ಪ ಬೆಂಬಲಿತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಸುದ್ದಿಗಾರರು ಕೇಳಿದಾಗ, ನಾನು, ಹಿರಿಯ ಸಂಸದರಾಗಿರುವ ಸಿದ್ದೇಶ್ವರ, ರೇಣುಕಾಚಾರ್ಯ ಅವರು ಮತ್ತು ನಮ್ಮೆಲ್ಲಾ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು, ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಚರ್ಚೆ ಮಾಡಿ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ಮೂವರ ಹೆಸರುಗಳನ್ನು ಅಖೈರುಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆವು. ಕೇಂದ್ರದ ವರಿಷ್ಠರು ನಮ್ಮ ಆಯ್ಕೆಗೆ ಸಮ್ಮತಿ ಸೂಚಿಸಿದರು ಎಂದರು.
ಶ್ರೀನಿವಾಸ ದಾಸಕರಿಯಪ್ಪ ಅವರು ನನ್ನ ಪರ, ವಿರುದ್ಧ ಎಂದು ಇಲ್ಲ, ಅವರು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಎಂದರೆ ಯಡಿಯೂರಪ್ಪ ಅಭ್ಯರ್ಥಿನೂ ಹೌದು, ವಿಜಯೇಂದ್ರ ಅಭ್ಯರ್ಥಿನೂ ಹೌದು, ಎಲ್ಲರ ಒಪ್ಪಿಗೆಯ ಅಭ್ಯರ್ಥಿನೂ ಹೌದು ಎಂದರು.