ಡಿಕೆ ಶಿವಕುಮಾರ್  
ರಾಜಕೀಯ

ಅಸ್ಸಾಂನಲ್ಲಿ ಹಿಟ್ಲರ್ ಆಡಳಿತಕ್ಕೆ ಕೊನೆ: ಹಿಮಂತ್ ರನ್ನು ಯಾವ ನದಿಯಲ್ಲಿ ಸ್ವಚ್ಛ ಮಾಡಿದಿರಿ; ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಳಿಸಿದ್ದೀರಿ?

ನನ್ನ ಅಳಿಯನ ಟೀ ಎಸ್ಟೇಟ್ ನಲ್ಲಿ ಅಸ್ಸಾಂ ಮೂಲದ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದೆ. ಅವರ ಸಮಸ್ಯೆ ಕೇಳಿದೆ. ಸಾಮಾನ್ಯ ಕಾರ್ಮಿಕರು ತಮ್ಮ ಕಣ್ಣೀರ ಕಥೆ ಹೇಳಿಕೊಂಡು ಸಮಸ್ಯೆಗಳನ್ನು ಹಂಚಿಕೊಂಡರು

ಗುವಾಹಟಿ: ಅಸ್ಸಾಂನಲ್ಲಿ ಬದಲಾವಣೆ ಕಾಲ ಬಂದಿದೆ. ಇಡೀ ಅಸ್ಸಾಂ ಹಿಟ್ಲರ್ ಆಡಳಿತದಿಂದ ಮುಕ್ತಿ ಪಡೆಯಲು ಬಯಸಿದೆ. ಈ ಹಿಟ್ಲರ್ ಆಡಳಿತಕ್ಕೆ ನಾವು ಕೊನೆ ಹಾಡಬೇಕಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುವಾಹಟಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ವಾತಾವರಣ ಚೆನ್ನಾಗಿದೆ, ರಾಜಕೀಯ ತಾಪಮಾನ ಹೆಚ್ಚಾಗಿದೆ. ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಅನೇಕ ಅಸ್ಸಾಮಿಗರನ್ನು ಭೇಟಿ ಮಾಡಿ ಮಾತನಾಡುತ್ತಿದ್ದೇನೆ. ಅವರು ತಮ್ಮ ಅನೇಕ ಅಭಿಪ್ರಾಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಆಲೋಚನೆ ಇತ್ತು. ಆಗ ಅವರು ನೀವು ನಮ್ಮ ಮಾತನ್ನು ಪ್ರಕಟಿಸಿದರೆ ನಮ್ಮ ಜೀವಕ್ಕೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಅಸ್ಸಾಂನಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ" ಎಂದು ತಿಳಿಸಿದರು.

"ನಾವು ಇಲ್ಲಿಗೆ ಶಿಕ್ಷಣ, ಉದ್ಯೋಗಕ್ಕಾಗಿ ಬಂದಿದ್ದು, ಇದು ಅತ್ಯಂತ ಸುರಕ್ಷಿತ ನಗರ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ ಎಂದರು. ನನ್ನ ಅಳಿಯನ ಟೀ ಎಸ್ಟೇಟ್ ನಲ್ಲಿ ಅಸ್ಸಾಂ ಮೂಲದ ಅನೇಕರು ಕೆಲಸ ಮಾಡುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದೆ. ಅವರ ಸಮಸ್ಯೆ ಕೇಳಿದೆ. ಸಾಮಾನ್ಯ ಕಾರ್ಮಿಕರು ತಮ್ಮ ಕಣ್ಣೀರ ಕಥೆ ಹೇಳಿಕೊಂಡು ಸಮಸ್ಯೆಗಳನ್ನು ಹಂಚಿಕೊಂಡರು. ಅವರಿಗೆ ಸಿಕ್ಕ ಭರವಸೆ, ಈಡೇರಿಲ್ಲ. ನೀವು ನಮಗೆ ಸಹಾಯ ಮಾಡಬೇಕು, ನೀವು ಮತ್ತೆ ಅಸ್ಸಾಂಗೆ ಹೋಗುವುದು ಯಾವಾಗ ಎಂದು ಒತ್ತಾಯ ಮಾಡಿದರು" ಎಂದರು.

"ಇಲ್ಲಿನ ಆಡಳಿತ ವಿರೋಧಿ ಅಲೆ ಬಗ್ಗೆ ನಾನು ಮಾತನಾಡುತ್ತಿಲ್ಲ. ಇದು ಅಸ್ಸಾಂ ರಾಜ್ಯದ ಜನರಲ್ಲಿರುವ ಬದಲಾವಣೆಯ ಬಯಕೆ ಬಗ್ಗೆ ಮಾತನಾಡುತ್ತಿರುವೆ. ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಸರ್ಕಾರವನ್ನು ಅವರು ಬಯಸಿದ್ದಾರೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗ ಅಧಿಕಾರದಲ್ಲಿ ಇದ್ದಂತೆ. ಎಲ್ಲ ವರ್ಗ ಒಗ್ಗಟ್ಟಾಗಿರುತ್ತದೆ. ಕಾಂಗ್ರೆಸ್ ಎಲ್ಲರನ್ನು ಒಗ್ಗೂಡಿಸಿದರೆ, ಬಿಜೆಪಿ ವಿಭಜಿಸುತ್ತದೆ" ಎಂದು ಹರಿಹಾಯ್ದರು.

ಬಿಜೆಪಿಯವರು ಬಾಂಗ್ಲಾ ವಲಸಿಗರ ವಿಚಾರ ಸೇರಿದಂತೆ ಒಂದೆರಡು ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನು ನಮ್ಮ ಮಾಜಿ ಸ್ನೇಹಿತರಿಗೆ ಒಂದು ಮಾತು ಕೇಳಬಯಸುತ್ತೇನೆ. ಹತ್ತು ವರ್ಷಗಳ ಹಿಂದೆ ಅಸ್ಸಾಂನ ಅತ್ಯಂತ ಭ್ರಷ್ಟ ರಾಜಕಾರಣಿ ಎಂಬ ಆರೋಪ ಹೊತ್ತಿದ್ದರು. ಅವರ ವಿರುದ್ಧ ಬಿಜೆಪಿಯವರು ಭ್ರಷ್ಟಾಚಾರ ಆರೋಪದ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಭ್ರಷ್ಟಾಚಾರದ ಅರೋಪ ಹೊತ್ತಿದ್ದ ಅವರು ಇಂದು ಇಷ್ಟು ಸ್ವಚ್ಛವಾಗಿರುವುದು ಹೇಗೆ? ಅವರನ್ನು ಗಂಗಾ, ಬ್ರಹ್ಮಪುತ್ರ ಅಥವಾ ಬೇರೆ ಯಾವ ನದಿಯಲ್ಲಿ ಮುಳುಗಿಸಿ ಅವರನ್ನು ನಿಷ್ಕಲ್ಮಶರನ್ನಾಗಿ ಮಾಡಿದರು? ಈ ಬಗ್ಗೆ ಅಮಿತ್ ಶಾ ಅವರು ಉತ್ತರ ನೀಡಬೇಕು. ಭ್ರಷ್ಟಾಚಾರ ಆರೋಪ ಹೊತ್ತ ಯಾವುದೇ ನಾಯಕರು ಬಿಜೆಪಿಗೆ ಹೋದರೆ ಅವರು ಬಹಳ ಪ್ರಮಾಣಿಕರಾಗುತ್ತಾರೆ. ಇದು ಹೇಗೆ ಎಂದು ಬಿಜೆಪಿ ನಾಯಕರು ಉತ್ತರಿಸಬೇಕು" ಎಂದು ತಿಳಿಸಿದರು.

"ಬಿಜೆಪಿಯವರು ಅನೇಕ ಆಮಿಷ ನೀಡಿ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ಬಲಿಷ್ಠವಾಗಿದ್ದರೆ, ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇದ್ದರೆ, ಕಾಂಗ್ರೆಸ್ ಸಂಸದರು, ನಾಯಕರನ್ನು ಸೆಳೆಯುವ ಅಗತ್ಯ ಏನಿತ್ತು? ಕಳೆದ 10 ವರ್ಷಗಳಿಂದ ಅವರದೇ ಸರ್ಕಾರ ಅಧಿಕಾರದಲ್ಲಿದ್ದು, ದಕ್ಷ ಆಡಳಿತ ನೀಡಿ ಉತ್ತಮವಾಗಿ ಕೆಲಸ ಮಾಡಿದ್ದರೆ, ಕಾಂಗ್ರೆಸ್ ನಾಯಕರನ್ನು ಸೆಳೆಯುವ ಅಗತ್ಯವೆನಿತ್ತು? ಈ ಸರ್ಕಾರದ ವಿರುದ್ಧ ಆರೋಪ ಪಟ್ಟಿ ತಯಾರಿಸಿದ ನಾಯಕನ ಬಳಿ ಹೋಗಿ ಅವರನ್ನು ಬೇಡಿಕೊಂಡು, ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ. ಅವರನ್ನು ಕಣಕ್ಕೆ ಇಳಿಸಿದ್ದೀರಿ. ಇದು ಬಿಜೆಪಿಯ ದೌರ್ಬಲ್ಯ ಹಾಗೂ ಸೋಲಿನ ಸೂಚನೆಯಾಗಿದೆ" ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅವಧಿಯಲ್ಲಿ ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಲಿಸಿದ್ದೀರಿ?

"ಹಿಮಂತ್ ಅವರು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ವಾಪಸ್ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 44 ಸಾವಿರ ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿತ್ತು. ಈಗ ಬಿಜೆಪಿ ಸರ್ಕಾರದಲ್ಲಿ ಎಷ್ಟು ಅಕ್ರಮ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಲಾಗಿದೆ?" ಎಂದು ಪ್ರಶ್ನಿಸಿದರು.

"ಅಸ್ಸಾಂನಲ್ಲಿ ಹಿಟ್ಲರ್ ಆಡಳಿತ ನಡೆಸಲಾಗುತ್ತಿದೆ. ಇಲ್ಲಿನ ಮುಖ್ಯಮಂತ್ರಿಗಳು ಇತ್ತೀಚಿಗೆ ಒಂದು ಹೇಳಿಕೆ ನೀಡಿದ್ದು, 30 ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಅವರು ತೀರ್ಮಾನ ಮಾಡುತ್ತಾರಂತೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಇದ್ದವರು. ಕಾಂಗ್ರೆಸ್ ಪಕ್ಷದಲ್ಲಿ ಬೆಳೆದವರು. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆತಂಕದಲ್ಲಿ ಅವರು ಈ ರೀತಿ ಹೇಳುತ್ತಿದ್ದಾರೆ. ತಾವು ಏನೇ ಹೇಳಿದರು ಅಸ್ಸಾಂ ಜನತೆ ಅದನ್ನು ಸ್ವೀಕರಿಸುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ.

ಜನ ಪ್ರಜ್ಞಾವಂತರಾಗಿದ್ದು, ಇದು ಸಾಧ್ಯವಿಲ್ಲ. ಹೀಗಾಗಿ ಜನ ಕಾಂಗ್ರೆಸ್ ಅನ್ನು ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಈ ರಾಜ್ಯವನ್ನು ಒಗ್ಗಟ್ಟಾಗಿ ಇಟ್ಟು, ರಕ್ಷಣೆ ಮಾಡಿದೆ. ಹಿಮಂತ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಭಾಗವಾಗಿದ್ದರು. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ಅವರು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.

"ಅವರ ರಕ್ತ ಕೂಡ ಕಾಂಗ್ರೆಸ್ ಆಗಿದೆ. ಈ ಮಾತು ಕೇವಲ ನನ್ನದಲ್ಲ. ಬಿಜೆಪಿ ನಾಯಕರು ಇದನ್ನೇ ಹೇಳುತ್ತಿದ್ದಾರೆ. ಬಿಜೆಪಿ ನಾಯಕರೇ ಈಗ ಅವರನ್ನು ವಿರೋಧಿಸುತ್ತಿದ್ದಾರೆ. 30 ಕ್ಷೇತ್ರಗಳ ಬಗ್ಗೆ ಮಾಡಿರುವ ಅರೋಪ ಸುಳ್ಳು. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ.

ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಬಂದಿತ್ತಾದರೂ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಆಮೂಲಕ ಅಧಿಕಾರ ತ್ಯಾಗ ಮಾಡಿದರು. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡ ಪಕ್ಷ ಕಾಂಗ್ರೆಸ್. ಇಂತಹ ಕುಟುಂಬದ ಬಗ್ಗೆ ಸುಳ್ಳು ಅರೋಪ ಮಾಡುತ್ತಿದ್ದಾರೆಂದರೆ ಅವರಿಗೆ ಚುನಾವಣೆಯಲ್ಲಿ ಸೋಲುವ ಆತಂಕ ಆವರಿಸಿದೆ ಎಂದರ್ಥ. ಅವರು ತಮ್ಮ ಪಕ್ಷ, ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧಕ್ಕೆ ಇರಾನ್ ಜನರ ಬೆಂಬಲ: ಮೊಜ್ತಾಬಾ ಖಮೇನಿ ಹೊಸ ಸಂದೇಶ, ಹೇಳಿದ್ದೇನು?

ತಮಿಳುನಾಡು ಚುನಾವಣೆ: DMK ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 2,000 ರೂ ಸೇರಿ ಭರಪೂರ ಉಚಿತ ಗ್ಯಾರಂಟಿಗಳ ಘೋಷಣೆ!

ಇದು ಹೊಸ ಕೋಳಿ: ಕಾಮೆಂಟರಿ ವೇಳೆ ಅಶ್ವಿನ್ ಕಾಲೆಳೆದ ವೀರೇಂದ್ರ ಸೆಹ್ವಾಗ್, Video

IPL 2026: ರೋಹಿತ್, ರಿಕಲ್ಟನ್ ಅಬ್ಬರದ ಬ್ಯಾಟಿಂಗ್; KKR ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ಜಾರ್ಖಂಡ್‌: ರಾಮನವಮಿ ಮೆರವಣಿಗೆ ವೇಳೆ ಹರಿದ ನೆತ್ತರು; ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ

SCROLL FOR NEXT