ಬೆಂಗಳೂರು: ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿತ್ತು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿತ್ತು. ಆದರೆ ಕಾರಣಾಂತರಗಳಿಂದ ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಅಂದರೆ ಮಾಧ್ಯಮದ ಮುಂದೆ ಹೇಳುವುದಕ್ಕಿಂತ ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೋಗಿ ಹೇಳುವೆ. ನಮ್ಮ ಹೈಕಮಾಂಡ್ ಮುಂದೆ ಹೇಳಬೇಕು, ಅಲ್ಲಿ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಹಿರಿಯರು ಚರ್ಚೆ ಮಾಡುವಾಗ ನಮ್ಮ ಭಾವನೆ ವ್ಯಕ್ತಪಡಿಸುವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ನೇತೃತ್ವದಲ್ಲಿ ಶಾಸಕರು ಗೆದ್ದಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರು ಸುಪ್ರೀಂ ಹಾಗೂ ಸರ್ಕಾರಕ್ಕೆ ಸಿಎಂ ಸುಪ್ರೀಂ. ಈ ಕುರಿತು ನಾನು ಈಗಾಗಲೇ ಪ್ರತಿಕ್ರಿಯೆ ನೀಡಿರುವೆ. ಸಿಎಂ ಸಿದ್ದರಾಮಯ್ಯನರು, ಡಿಕೆ ಶಿವಕುಮಾರ್ ಅವರು, ಅನೇಕ ಮುಖಂಡರು, ಬೂತ್ ಮಟ್ಟದ ಕಾರ್ಯಕರ್ತರು ಎಲ್ಲರೂ ಸೇರಿ ದುಡಿದಾಗ ಜನ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ, ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಪೆಟ್ರೋಲ್ ರೇಟ್ 65 ರೂಪಾಯಿ ಇತ್ತು ಆಗ ಇವರು ಟೀಕೆ ಮಾಡುತ್ತಿದ್ದರು. ಈಗ ನೋಡಿದರೆ 105 ರೂಪಾಯಿ ಆಗಿದೆ, ಈಗ ಡಿಸೇಲ್ 98 ರೂಪಾಯಿ ಆಗಿದೆ, ಅಡುಗೆ ಎಣ್ಣೆ ಈಗ 150 ರೂಪಾಯಿ ಆಗಿದೆ, ಇವರು ದರ ಏರಿಕೆ ಮಾಡಿದ್ದಕ್ಕೆ ಏನು ಹೇಳಬೇಕು ಎಂದರು.