ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಡಿಪಿಐಗೆ ಮತ ಬಿದ್ದಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಪಕ್ಷದ ಮಟ್ಟದಲ್ಲಿ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ, ಮುಸ್ಲಿಂ ಮತಗಳು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಡೆಗೆ ಪಲ್ಲಟಗೊಂಡಿರುವುದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಒಟ್ಟು 56 ಸಾವಿರ ಮುಸ್ಲಿಮರು ಮತ ಚಲಾಯಿಸಿದ್ದು, ಈ ಪೈಕಿ, ಕಾಂಗ್ರೆಸ್ಗೆ 35 ಸಾವಿರ ಮತ ಬಂದಿದೆ. ನಮ್ಮ ಲೆಕ್ಕಾಚಾರ ಮೀರಿ, ಎಸ್‌ಡಿಪಿಐಗೆ ಈ ಬಾರಿ ಹೆಚ್ಚು ಮತ ಬಿದ್ದಿದೆ. ನಮಗೆ ಏಕೆ ಕಡಿಮೆ ಮತ ಬಂದಿವೆ ಎಂದು ವಿಚಾರ ಮಾಡುತ್ತೇವೆ ಎಂದರು.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ 2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಈ ಎರಡೂ ಕ್ಷೇತ್ರಗಳನ್ನು ನಾವು ಗೆದ್ದಿದ್ದೇವೆ. ಬಿಜೆಪಿಯವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು ಎಂದರು.
ಕಾಂಗ್ರೆಸ್ ನಾಯಕರಾದ ಅಬ್ದುಲ್ ಜಬ್ಬಾರ್ ಮತ್ತು ನಾಸೀರ್ ಅಹ್ಮದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೈಗೊಂಡ ಅಮಾನತು ಕ್ರಮವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಗೆಲುವು ಸಾಧಿಸುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ತಮಿಳುನಾಡಿನ ಜನರು ಬದಲಾವಣೆ ಬಯಸಿದ್ದಾರೆ. ಯುವ ಜನಾಂಗ ನಟ ವಿಜಯ್ಗೆ ಮತ ಹಾಕಿದ್ದಾರೆ. ಇದು ಅಚ್ಚರಿಯ ಫಲಿತಾಂಶ. ಬೇರೆ ರಾಜ್ಯಗಳ ಮೇಲೆ ಪ್ರಭಾವ ಬೀರುವುದಿಲ್ಲ.ಕೇರಳದಲ್ಲಿ ನಿರೀಕ್ಷೆಯಂತೆ ನಾವು ಗೆದ್ದಿದ್ದೇವೆ’ ಎಂದರು.