ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ವಿಚಾರ ಭಾರೀ ಚರ್ಚೆಯಾಗುತ್ತಿರುವ ನಡುವಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಪಕ್ಷದೊಳಗಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷದ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಳ್ಳಬಹುದು. ಇಲ್ಲವೇ ಇಬ್ಬರೂ ನಾಯಕರು ದೆಹಲಿಗೆ ಹೋಗಿ ಪಕ್ಷದೊಳಗಿನ ಗೊಂದಲ ನಿವಾರಿಸಬೇಕು ಎಂದು ಹೇಳಿದರು.
ಇದೇ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಇತ್ತೀಚಿನ ಉಪಚುನಾವಣೆ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಕೇವಲ ನಿರೀಕ್ಷಿತ ಫಲಿತಾಂಶವಲ್ಲ, ಅಹಿಂದ ವರ್ಗಗಳ ಬೆಂಬಲ ಮತ್ತೆ ಪಕ್ಷದತ್ತ ಮರಳಿದ ಸೂಚನೆ ಎಂದರು.
ಅಹಿಂದ ಮತಗಳು ಕಾಂಗ್ರೆಸ್ ಗೆಲುವಿಗೆ ಅತ್ಯಂತ ಮುಖ್ಯ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರ ಬೆಂಬಲವೇ ಪಕ್ಷದ ಬಲ” ಎಂದು ತಿಳಿಸಿದರು.
ಇದೇ ವೇಳೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕ ಉಮೇಶ್ ಮೇಟಿ ಅವರು ಜಾರಕಿಹೊಳಿಯನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಮೈಸೂರು ಪೇಟಾ ಹಾಗೂ ಶಾಲು ಹೊದಿಸಿ ಅಭಿನಂದಿಸಿದ ಮೇಟಿ, ಚುನಾವಣಾ ಪ್ರಚಾರದ ವೇಳೆ ನೀಡಿದ ಬೆಂಬಲ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದ ತಿಳಿಸಿದರು.
ಇದರಂತೆ ಉಮೇಶ್ ಮೇಟಿಗೆ ಅಭಿನಂದನೆ ಸಲ್ಲಿಸಿದ ಜಾರಕಿಹೊಳಿ, “ಗೆಲುವು ದೊಡ್ಡ ಜವಾಬ್ದಾರಿಯನ್ನು ತರುತ್ತದೆ. ಜನಸೇವೆಗೆ ಆದ್ಯತೆ ನೀಡಿ, ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಜನರ ವಿಶ್ವಾಸ ಉಳಿಸಿಕೊಂಡು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಲ್ಲಿಕಾರ್ಜುನ ಮೇಟಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮ ಕೊಣ್ಣೂರು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.