ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ 
ರಾಜಕೀಯ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಸಿದ್ದರಾಮಯ್ಯ ಅವರು ಮೇ 28ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ತಿಳಿದುಬಂದಿದೆ. ಇಂದು ರಾಜ್ಯಕ್ಕೆ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅವರು ಆಗಮಿಸಲಿದ್ದು, ಮಹತ್ವದ ಸಭೆ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ನವದೆಹಲಿ/ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ತಿಂಗಳುಗಳಿಂದ ಮುಂದುವರಿದಿದ್ದ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಪಕ್ಷದ ಹೈಕಮಾಂಡ್ ನಡೆಸಿದ ಸುದೀರ್ಘ ಸಮಾಲೋಚನೆಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆಯಿಂದ ಕೆಳಗಿಳಿಯಲು ಒಪ್ಪಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಯಾವಾಗ ರಾಜೀನಾಮೆ ನೀಡಲಿದ್ದಾರೆ ಹಾಗೂ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುರಿತು ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನಡೆದಿದೆ ಎನ್ನಲಾದ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಈಗ ಮತ್ತೆ ಚರ್ಚೆಗೆ ಬಂದಿದೆ.

2023ರ ವಿಧಾನಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಹಂಚಿಕೆಯ ಅವಧಿ ಕಳೆದ ನವೆಂಬರ್‌ನಲ್ಲೇ ಪೂರ್ಣಗೊಂಡಿದ್ದರೂ, ಸಿದ್ದರಾಮಯ್ಯ ಸ್ಥಾನ ತ್ಯಜಿಸಲು ಸಮ್ಮತಿಸಿರಲಿಲ್ಲ ಎನ್ನಲಾಗಿದೆ.

ದೆಹಲಿಯಲ್ಲಿ ಹೈಕಮಾಂಡ್‌ ಮ್ಯಾರಥಾನ್ ಸಭೆ

ಸೋಮವಾರ ರಾತ್ರಿ ದೆಹಲಿಗೆ ಕರೆಯಲ್ಪಟ್ಟ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ನಾಯಕತ್ವ ಪ್ರತ್ಯೇಕ ಹಾಗೂ ಜಂಟಿ ಸಭೆಗಳನ್ನು ನಡೆಸಿತು.

ಈ ಸಭೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಹಾಗೂ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಭಾಗವಹಿಸಿದ್ದರು.

ಮೂಲಗಳ ಪ್ರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಒಳಜಗಳಕ್ಕೆ ತೆರೆ ಎಳೆಯಲು ಮತ್ತು 2028ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ನಾಯಕತ್ವ ಬದಲಾವಣೆ ಅಗತ್ಯವೆಂದು ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆಂದು ತಿಳಿದುಬಂದಿದೆ.

ಇದೇ ವೇಳೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸುವ ಅವಕಾಶದ ಕುರಿತು ಸಹ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.

100ಕ್ಕೂ ಹೆಚ್ಚು ಶಾಸಕರ ಬೆಂಬಲ ಪತ್ರದೊಂದಿಗೆ ದೆಹಲಿ ತೆರಳಿದ್ದ ಸಿದ್ದು

ಏತನ್ಮಧ್ಯೆ ಸಿದ್ದರಾಮಯ್ಯ ತಮ್ಮ ಪರವಾಗಿ ಸುಮಾರು 100 ಕಾಂಗ್ರೆಸ್ ಶಾಸಕರ ಬೆಂಬಲವಿರುವುದನ್ನು ತೋರಿಸುವ ಪತ್ರವನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದಾರೆಯೆಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ವಿಧಾನಸಭೆಯಲ್ಲಿ 134 ಸದಸ್ಯರ ಬಲವಿದ್ದು, ಶಾಸಕರ ಬಹುಮತ ಬೆಂಬಲ ಇನ್ನೂ ತಮ್ಮೊಂದಿಗೇ ಇದೆ ಎಂಬ ಸಂದೇಶವನ್ನು ಅವರು ನೀಡಲು ಪ್ರಯತ್ನಿಸಿದ್ದಾರೆಂದು ತಿಳಿದುಬಂದಿದ.

ಆದರೆ, ಹೈಕಮಾಂಡ್ ನಾಯಕತ್ವ ಬದಲಾವಣೆಯ ಪರವಾಗಿ ಒಲವು ತೋರಿದ ಹಿನ್ನೆಲೆಯಲ್ಲಿ, ದೆಹಲಿಯಲ್ಲೇ ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ ಕೊನೆಗೆ ರಾಜೀನಾಮೆಗೆ ಒಪ್ಪಿಗೆ ಸೂಚಿಸಿದ್ದಾರೆಯೆಂದು ಮೂಲಗಳು ಹೇಳಿವೆ.

ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಸಿದ್ದು

ಇದೇ ವೇಳೆ ಸಿದ್ದರಾಮಯ್ಯ ಅವರು ಮೇ 28ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ತಿಳಿದುಬಂದಿದೆ. ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಏತನ್ಮಧ್ಯೆ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿ ಮುಂದಿನ ಬೆಳವಣಿಗೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆಂದು ತಿಳಿದುಬಂದಿದೆ

ಡಿಕೆಶಿಗೆ ಸಿಎಂ ಪಟ್ಟ..?

ಪ್ರಸ್ತುತ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿದ್ದಾರೆ.

ಸಂಘಟನಾ ಸಾಮರ್ಥ್ಯ, ಪಕ್ಷದ ಸಂಕಷ್ಟದ ಸಮಯದಲ್ಲಿ ವಹಿಸಿದ ಪಾತ್ರ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಎಂಬ ಕಾರಣಗಳಿಂದ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಅಂತಿಮ ಘೋಷಣೆ ಹೊರಬರುವವರೆಗೆ ಯಾವುದೇ ಹೆಸರು ಖಚಿತವಾಗಿಲ್ಲ.

ಡಿಕೆಶಿ ಅಲ್ಲದೆ ಬೇರಾರಿಗೆ ಅವಕಾಶವಿದೆ?

ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಸಂಪೂರ್ಣ ಹೊಸ ನಾಯಕತ್ವಕ್ಕೆ ಅವಕಾಶ ನೀಡುವ ಆಯ್ಕೆಯನ್ನೂ ಪರಿಗಣಿಸುತ್ತಿದೆ ಎನ್ನಲಾಗಿದೆ.

ಯುವ, ಸ್ವಚ್ಛ ರಾಜಕೀಯ ಇಮೇಜ್ ಹೊಂದಿರುವ ನಾಯಕರನ್ನು ಮುಂದಿಟ್ಟುಕೊಂಡು 2028ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಪೈಕಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ. ಆಡಳಿತಾತ್ಮಕ ಅನುಭವ, ಅಭಿವೃದ್ಧಿ ದೃಷ್ಟಿಕೋನ ಮತ್ತು ವಿವಾದರಹಿತ ವ್ಯಕ್ತಿತ್ವ ಅವರ ಬಲವಾಗಿದೆ. ಇದೇ ರೀತಿ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ.ಪಾಟೀಲ್ ಅವರ ಹೆಸರೂ ಪರಿಗಣನೆಯಲ್ಲಿದೆ. ಇಬ್ಬರೂ ಕಾರ್ಯಕ್ಷಮ ಹಾಗೂ ಸ್ವಚ್ಛ ಇಮೇಜ್ ಹೊಂದಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಅಧಿಕೃತ ಘೋಷಣೆಗೆ ಕಾದಿರುವ ರಾಜ್ಯ ರಾಜಕೀಯ

ಇದೂವರೆಗೆ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಸುದ್ದಿಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಸಿದ್ದರಾಮಯ್ಯ ಹಾಗೂ ವೆಣುಗೋಪಾಲ್ ಇಬ್ಬರೂ ಸಾರ್ವಜನಿಕವಾಗಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ಮತ್ತು ನಾಯಕರ ಚಟುವಟಿಕೆಗಳು ಕರ್ನಾಟಕ ರಾಜಕೀಯದಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಸಂದೇಶ ನೀಡುತ್ತಿವೆ.

ರಾತ್ರಿಯೇ ಬೆಂಗಳೂರಿಗೆ ಸಿದ್ದರಾಮಯ್ಯ ವಾಪಸ್

ದೆಹಲಿಯಲ್ಲಿ ನಡೆದ ಹೈವೋಲ್ಟೇಟ್​ ಸಭೆ ಬಳಿಕ ರಾತ್ರಿಯೇ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಆಗಮಿಸಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಅವರು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಸಿಎಂ ಬರುವ ಸಮಯಕ್ಕೆ ಸಚಿವ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಜಮೀರ್ ಕೂಡ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.

ಮಿಡ್ ನೈಟ್ ಮೀಟಿಂಗ್

ದೆಹಲಿಯಿಂದ ವಾಪಸ್ ಆದ ಬೆನ್ನಲ್ಲೇ ಸಿಎಂ ನಿವಾಸ ಕಾವೇರಿಯಲ್ಲಿ ಮಿಡ್ ನೈಟ್ ಮೀಟಿಂಗ್ ನಡೆದಿದ್ದು, ಆಪ್ತ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಜೊತೆಯಾಗಿಯೇ ಹೆಚ್ಎಎಲ್ ವಿಮಾನ ನಿಲ್ದಾಣ ಬಂದ ಸಚಿವರ ಜೊತೆ ಸಿದ್ದರಾಮಯ್ಯ ಅವರು, ದೆಹಲಿ ಬೆಳವಣಿಗೆ ಮುಂದಿನ ನಿರ್ಧಾರ ಸಂಬಂಧ ಸಚಿವರ ಜೊತೆ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

ಸಿಎಂ ನಿವಾಸಕ್ಕೆ ಪರಮೇಶ್ವರ್, ದಿನೇಶ್ ಗುಂಡೂರಾವ್, ಅಶೋಕ್ ಪಟ್ಟಣ್, ಎಂ ಸಿ ಸುಧಾಕರ್, ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್, ಬೈರತಿ ಸುರೇಶ್ ಕೂಡ ಆಗಮಿಸಿದ್ರು. ಕೆಲ ಕಾಲ ನಡೆದ ಸಭೆಯ ಬಳಿಕ ಸಚಿವರು ವಾಪಸ್ ಆಗಿದ್ದಾರೆಂದು ಮೂಲಗಳು ತಿಳಿಸಿವೆ.

ರಾಜ್ಯಕ್ಕಿಂದು ಹೈಕಮಾಂಡ್ ನಾಯಕರು

ಈ ನಡುವೆ ಇಂದು ರಾಜ್ಯಕ್ಕೆ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿಕೆ.ಸಿ. ವೇಣುಗೋಪಾಲ್ ಅವರು ಆಗಮಿಸಲಿದ್ದು, ಮಹತ್ವದ ಸಭೆ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ನಾಳೆ (ಗುರುವಾರ) ಸಿಎಂ ಸಿದ್ದರಾಮಯ್ಯ ಕೊನೆಯ ಸಂಪುಟ ಸಭೆ ನಡೆಸಲಿದ್ದು ಬಳಿಕ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಬೆಂಗಳೂರಿಗೂ ಮಹಾಮಾರಿ ಎಬೋಲಾ ಎಂಟ್ರಿ? ಉಂಗಾಂಡ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ; ಆರೋಗ್ಯ ಇಲಾಖೆ ಹೈ ಅಲರ್ಟ್!

SCROLL FOR NEXT