ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದ್ದು, ಹಲವು ಮಹತ್ವದ ಬೆಳವಣಿಗೆಗಳು ಜರುಗುತ್ತಿವೆ. ಮುಖ್ಯಮಂತ್ರಿ ಹುದ್ದೆ ಕುರಿತ ರಾಜಕೀಯ ಬೆಳವಣಿಗೆಗಳು ಮತ್ತು ಊಹಾಪೋಹಗಳ ನಡುವೆಯಲ್ಲಿ, ಬೆಂಗಳೂರಿನ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಹೊರಗಿನ ದೃಶ್ಯಗಳು ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾ ಕಣ್ಣಲ್ಲಿ ಹೀಗೆ ಸೆರೆಯಾಗಿದೆ.
ಮುಖ್ಯಮಂತ್ರಿ ಹುದ್ದೆ ಬದಲಾವಣೆ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ತೀವ್ರ ಹರ್ಷಗೊಂಡಿದ್ದಾರೆ. ರಾಜಕೀಯ ಬೆಳವಣಿಗೆಗಳು ಮತ್ತು ಊಹಾಪೋಹಗಳ ನಡುವೆಯಲ್ಲಿ, ಬೆಂಗಳೂರಿನ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಹೊರಗೆ ಅವರ ಬೆಂಬಲಿಗರು ಬೊಕ್ಕೆ ಹಿಡಿದು ತಮ್ಮ ನೆಚ್ಚಿನ ನಾಯಕನಿಗೆ ಶುಭಕೋರಲು ಕಾಯುತ್ತಿರುವ ದೃಶ್ಯ ಕಂಡುಬಂತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಪಕ್ಷದ ನಾಯಕರ ‘ಬ್ರೇಕ್‌ಫಾಸ್ಟ್ ಮೀಟಿಂಗ್’ನ್ನು ಕರೆದಿದ್ದಾರೆ. ಅದರಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಭಾಗವಹಿಸುತ್ತಿದ್ದಾರೆ. ಇಂದು ಬೆಳಗ್ಗೆ ಸಿದ್ದರಾಮಯ್ಯನವರ ನಿವಾಸದ ಹೊರಗೆ ಪೊಲೀಸ್ ಭದ್ರತೆ ಕಂಡುಬಂತು.
ವಿಧಾನಸೌಧದಲ್ಲಿ ಭಾವುಕ ವಿದಾಯ – ಕಣ್ಣೀರಿಟ್ಟ ಸಿಬ್ಬಂದಿ
ಸಿದ್ದರಾಮಯ್ಯ ಅವರ ಸಿಎಂ ಅಧಿಕಾರದ ಕೊನೆಯ ದಿನ ಎಂದು ನಿನ್ನೆ ಹೇಳಲಾಗುತ್ತಿದ್ದು, ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಸಿಎಂ ಕಚೇರಿಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಯಾಯಿತು. ಮೂರು ವರ್ಷಗಳ ಹಿಂದೆ 2023ರ ಮೇ 20ರಂದು ಪೂಜೆ ನೆರವೇರಿಸಿ ಸಂಭ್ರಮದಿಂದ ಸಿದ್ದರಾಮಯ್ಯ ಅವರ ನಾಮಫಲಕ ಹೊತ್ತು ಸಜ್ಜಾಗಿದ್ದ ಸಿಎಂ ಕಚೇರಿ ಈಗ ಬಹುತೇಕ ಖಾಲಿಯಾಗಿದೆ.
ನಿನ್ನೆ ಸಿಎಂ ಕಚೇರಿಯಿಂದ ಸಿದ್ದರಾಮಯ್ಯ ಹೊರನಡೆಯುತ್ತಿದ್ದಾಗ ಸಚಿವಾಲಯದ ನೂರಾರು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಸಿಬ್ಬಂದಿಗೆ ಸಮಾಧಾನಪಡಿಸುತ್ತಾ ಸಿದ್ದರಾಮಯ್ಯ ಅವರು ಕೈಮುಗಿದು ಹೆಜ್ಜೆ ಹಾಕುತ್ತಿದ್ದಾಗ, ‘ಸಿದ್ದರಾಮಯ್ಯ ಸಾಹೇಬ್ರಿಗೆ ಜೈ, ಹುಲಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.
ಈ ಭಾವುಕ ಕ್ಷಣಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರಿಂದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ)’ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದರು.