ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆ ಮತ್ತು ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಡಿಕೆ ಶಿವಕುಮಾರ್ ಅವರು ಸೋಮವಾರ ಗೋಧೂಳಿ ಸಮಯದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈಗಾಗಲೇ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದರಂತೆ ಇಂದು ಮಧ್ಯಾಹ್ನದಿಂದ ಸಿದ್ಧತೆಗಳು ಆರಂಭವಾಗಿವೆ.
ಈ ಮಧ್ಯೆ, ಡಿಕೆ ಶಿವಕುಮಾರ್ ಅವರೊಂದಿಗೆ ಉಪ ಮುಖ್ಯಮಂತ್ರಿಗಳು ಸೇರಿದಂತೆ 8 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ
ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ನೂತನ ನಾಯಕನಾಗಿ ಡಿ.ಕೆ. ಶಿವಕುಮಾರ್ ಹೆಸರು ಅಂತಿಮವಾಗಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಲಿದ್ದು, ಕೇಂದ್ರ ನಾಯಕರಾದ ಕೆ.ಸಿ, ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರು ಅದಕ್ಕೆ ಅನುಮೋದಿಸಲಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು ಲೋಕಭವನಕ್ಕೆ ತೆರಳಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚೆ
ಪಸ್ತುತ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ.