ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು SIR (ವಿಶೇಷ ಸಮಗ್ರ ಪರಿಷ್ಕರಣೆ) ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೀದರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓವೈಸಿ, ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ವಿವಿಧ ರಾಜ್ಯಗಳು ಹಾಗೂ ನಗರಗಳಲ್ಲಿ ಬೇರೆ ಬೇರೆ ನಿಲುವುಗಳನ್ನು ತಾಳುತ್ತಿದೆ ಎಂದು ಆರೋಪಿಸಿದರು. ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ನ ನಿಲುವು ಒಂದು ರೀತಿಯದ್ದಾದರೆ, ಬೆಂಗಳೂರಿನಲ್ಲಿ ಮತ್ತೊಂದು, ದೆಹಲಿಯಲ್ಲಿ ಸಂಪೂರ್ಣ ಭಿನ್ನವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿದ ಓವೈಸಿ, ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರು ಎಸ್‌ಐಆರ್ ನ್ನು ಉತ್ತಮ ಎಂದು ಬಣ್ಣಿಸಿದರೆ, ಮತ್ತೊಬ್ಬ ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದರು. ದೇಶಾದ್ಯಂತ ಕಾಂಗ್ರೆಸ್ ಎಸ್‌ಐಆರ್ ನ್ನು ವಿರೋಧಿಸುತ್ತಿದೆ. ದೆಹಲಿ, ಹೈದರಾಬಾದ್ ಸೇರಿದಂತೆ ವಿವಿಧೆಡೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಆಯಾ ಸ್ಥಳಗಳಲ್ಲಿ ಅದರ ನಿಲುವು ವಿಭಿನ್ನವಾಗಿದೆ ಎಂದು ಟೀಕಿಸಿದರು.
'ಹೈದರಾಬಾದ್‌ನಲ್ಲಿ ನಿಮ್ಮ ನಿಲುವು ಒಂದು ರೀತಿಯದ್ದಾಗಿದೆ, ಬೆಂಗಳೂರಿನಲ್ಲಿ ಮತ್ತೊಂದು ನಿಲುವು, ದೆಹಲಿಯಲ್ಲಿ ಸಂಪೂರ್ಣ ಭಿನ್ನವಾದ ನಿಲುವು ಹೊಂದಿದ್ದೀರಿ' ಎಂದು ಓವೈಸಿ ಹೇಳಿದರು.
ಇದೇ ವೇಳೆ ಕರ್ನಾಟಕದಲ್ಲಿ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಬೀದರ್‌ನಲ್ಲಿ ಸಾಕ್ಷರತಾ ಪ್ರಮಾಣ ಶೇ.65ರಷ್ಟಿದ್ದರೆ, ಇಡೀ ಕರ್ನಾಟಕದಲ್ಲಿ ಶೇ.75ರಷ್ಟಿದೆ. ಇದಕ್ಕೂ ಮುಸ್ಲಿಮರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿಯ ವರದಿಯನ್ನು ಉಲ್ಲೇಖಿಸಿದ ಓವೈಸಿ, ಜೀವನೋಪಾಯದ ವಿಚಾರದಲ್ಲಿ ಮುಸ್ಲಿಮರು 32ನೇ ಸ್ಥಾನದಲ್ಲಿದ್ದಾರೆ. ಇದು ಅತ್ಯಂತ ಕೆಳಮಟ್ಟದ ಸ್ಥಾನವಾಗಿದೆ. ಈ ವರ್ಗದಲ್ಲಿ ಶೇ.27ರಷ್ಟು ಮುಸ್ಲಿಮರಿದ್ದಾರೆ, ಜೀವನೋಪಾಯದ ವಿಚಾರದಲ್ಲಿ ಮುಸ್ಲಿಮರು ಅತ್ಯಂತ ಹಿಂದುಳಿದಿದ್ದಾರೆ ಎಂದು ತಿಳಿಸಿದರು.