ಬೆಂಗಳೂರು: ಮಿಸ್ಟರ್ Useless Fellow, 'ಇಟಲಿ' ಪ್ರಿಯಾಂಕ ಖರ್ಗೆ ಅವರೇ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು 'ಹಳ್ಳಿ ಗುಗ್ಗು' ಹಾಗೂ 'ಈಡಿಯಟ್' ಎಂದು ಜರಿದು ನಿಮ್ಮ 'ಹೈಟೆಕ್' ಅಹಂಕಾರವನ್ನು ಹಾಗೂ ನಿಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ ಎಂದು ಜೆಡಿಎಸ್ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿದೆ. ಅಧಿಕಾರದ ಮದದಲ್ಲಿ ನೀವು ಆಡಿರುವ ಈ ಮಾತು ಕೇವಲ ಕುಮಾರಸ್ವಾಮಿ ಅವರಿಗಷ್ಟೇ ಅಲ್ಲ, ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಕಷ್ಟಪಟ್ಟು ದುಡಿಯುವ ರೈತರಿಗೆ ಮಾಡಿದ ಘೋರ ಅಪಮಾನ. ದೆಹಲಿ ಮತ್ತು ಇಟಲಿ ನಾಯಕರ ಎದುರು ಜೀ ಹುಜೂರ್ ಎನ್ನುವ 'ನಿಮ್ಮಂತಹ ಗುಲಾಮರಿಗೆ’ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ.
ರೈತರ ಕಷ್ಟಗಳ ಬಗ್ಗೆ, ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂತಹ 'ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು "ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ"! ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ, ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಹಾಗೂ ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಅನ್ನದಾತರ ಬೆನ್ನಿಗೆ ನಿಂತ ಮಣ್ಣಿನ ಮಗನ ನೈಜತೆ 'ಗುಗ್ಗು' ಮತ್ತು 'ಈಡಿಯಟ್' ತರಹವೇ ಕಾಣುತ್ತದೆ. ಹೌದು, ನಾವು ರೈತರ ಪರ ನಿಲ್ಲುವ ಹೆಮ್ಮೆಯ 'ಹಳ್ಳಿ ಗುಗ್ಗು'ಗಳೇ ಹೊರತು, ಬಣ್ಣ ಬದಲಿಸುವ ನಿನ್ನಂತಹ 'ಕಾರ್ಪೋರೇಟ್ ಓತಿಕ್ಯಾತ'ಗಳಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದೆ.
ನಿಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತೂ ಒಳಿತಾಗಿಲ್ಲ. ಆದರೆ ನಿಮ್ಮ ಶೋಕಿ ಹಾಗೂ ವ್ಯಂಗ್ಯದ ಮಾತುಗಳಿಗೆ ಮಾತ್ರ ಕಮ್ಮಿಯಿಲ್ಲ. ಎಸಿ ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು?
ಮರೆಯಬೇಡಿ ಇಟಲಿ ಪ್ರಿಯಾಂಕ ಖರ್ಗೆಯವರೇ, ಎಲೆಕ್ಷನ್ ಬಂದಾಗ ಇದೇ 'ಹಳ್ಳಿ ಗುಗ್ಗು'ಗಳ ಮನೆ ಬಾಗಿಲಿಗೆ ನೀವು ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ಆದರೆ ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ. ಇದೇ ಹಳ್ಳಿಗರು 2028ಕ್ಕೆ ವೋಟ್ ಒತ್ತುವಾಗ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ ಎಂದಿದೆ.
ಎಸಿ ರೂಮಿನಲ್ಲಿ ಕುಳಿತು ರಾಜಕೀಯ ಮಾಡುವವರಿಗೆ ಬಿಸಿಲಲ್ಲಿ ಬೆವರಿಳಿಸಿ ದುಡಿಯುವ ರೈತರ ಕಷ್ಟ ಏನು ಗೊತ್ತು? ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಕುಮಾರಣ್ಣನವರು ನಿಮಗೆ 'ಹಳ್ಳಿ ಗುಗ್ಗು' ತರಹ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಹಳ್ಳಿಯವರ ವೋಟು ಬೇಕು, ಆದರೆ ಹಳ್ಳಿ ನಾಯಕರು ಗುಗ್ಗುಗಳಾ? ಇದು ದೇಶದ ಸಮಸ್ತ ಹಳ್ಳಿ ಜನತೆಗೆ ಮಾಡಿದ ಅಪಮಾನ. ನಿಮ್ಮ ಈ ದೌಲತ್ತು, ಕುಹುಕದ ಮಾತಿಗೆ ಜನ ನಿಮಗೆ ತಕ್ಕ ಪ್ರತ್ಯುತ್ತರ ಚುನಾವಣೆಯಲ್ಲಿ ನೀಡುತ್ತಾರೆ.
ರೈತರ ಕಷ್ಟಗಳಿಗೆ ಮಿಡಿದು, ಅವರ ಕಣ್ಣೀರು ಒರೆಸಿ ಸಾಲ ಮನ್ನಾ ಮಾಡಿದ ಮಣ್ಣಿನ ಮಗ ಕುಮಾರಣ್ಣ ನಮಗೆ ಹೆಮ್ಮೆಯ 'ಹಳ್ಳಿ ಗುಗ್ಗು'ವೇ. ಅಪ್ಪನ ಕೃಪೆಯಿಂದ, ಎಸಿ ಕೊಠಡಿಯಲ್ಲಿ ಕುಳಿತು ರಾಜಕಾರಣ ಮಾಡುವ ನಿಮಗೇನು ಗೊತ್ತು ಮಣ್ಣಿನ ಮಕ್ಕಳ ತಾಕತ್ತು? ಇದೇ ಹಳ್ಳಿ ಜನರ ಶಕ್ತಿ ಮುಂದಿನ ಚುನಾವಣೆಯಲ್ಲಿ ನಿಮಗೇ ಗೊತ್ತಾಗಲಿದೆ ಎಂದಿದೆ. ಹೌದು, ನಮ್ಮದು ಹಳ್ಳಿಗರ ಪಕ್ಷವೇ... ಏನಿವಾಗ? ಎಂದು ಜೆಡಿಎಸ್ ತಪರಾಕಿ ಹಾಕಿದೆ.