PSI ನೇಮಕಾತಿ ಹಗರಣ: CID ನೋಟಿಸ್ ಕೊಟ್ಟಾಗ ಉತ್ತರಿಸಲಿಲ್ಲವೇಕೆ..?; ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು
ಆಗ ಸಂವಿಧಾನ ಎಲ್ಲಿತ್ತು ಪ್ರಿಯಾಂಕ್ ಖರ್ಗೆಯವರೇ? ನಾನು ಎಂದಿಗೂ ಆಧಾರರಹಿತ ಆರೋಪಗಳನ್ನು ಮಾಡಿ ನುಣುಚಿಕೊಳ್ಳುವ ಕೆಲಸ ಮಾಡಿಲ್ಲ. ಪ್ರತಿ ಬಾರಿ ಮಾತನಾಡುವಾಗಲೂ ದಾಖಲೆಗಳ ಸಮೇತವೇ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ.
ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಟೀಕೆಗಳಿಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, 2022ರ ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆ ವೇಳೆ ಸಿಐಡಿ ನೀಡಿದ್ದ ನೋಟಿಸ್‌ಗೆ ಪ್ರಿಯಾಂಕ್ ಖರ್ಗೆ ಏಕೆ ಉತ್ತರಿಸಿರಲಿಲ್ಲ ಎಂದು ಪ್ರಶ್ನಿಸಿದರು.
ಆಗ ಸಂವಿಧಾನ ಎಲ್ಲಿತ್ತು ಪ್ರಿಯಾಂಕ್ ಖರ್ಗೆಯವರೇ? ನಾನು ಎಂದಿಗೂ ಆಧಾರರಹಿತ ಆರೋಪಗಳನ್ನು ಮಾಡಿ ನುಣುಚಿಕೊಳ್ಳುವ ಕೆಲಸ ಮಾಡಿಲ್ಲ. ಪ್ರತಿ ಬಾರಿ ಮಾತನಾಡುವಾಗಲೂ ದಾಖಲೆಗಳ ಸಮೇತವೇ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. 543 ಪಿಎಸ್‌ಐ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಿಯಾಂಕ್ ಖರ್ಗೆ ಎಲ್ಲಿಗೆ ಸಲ್ಲಿಸಿದ್ದರು? ಎಂದು ಪ್ರಶ್ನಿಸಿದರು.
ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಎಲ್ಲ ದಾಖಲೆಗಳು, ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳಿವೆ ಎಂದು ಪ್ರಿಯಾಂಕ್ ಖರ್ಗೆ ಈ ಹಿಂದೆ ಹೇಳಿಕೊಂಡಿದ್ದರು ಎಂದು ನೆನಪಿಸಿದರು.
ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದೇಕೆ? ಕಾರಣ ಬಿಚ್ಚಿಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ..!
2022ರ ಏಪ್ರಿಲ್ 28ರಂದು ಪ್ರಿಯಾಂಕ್ ಖರ್ಗೆ ಅಂದಿನ ಸಿಐಡಿ ಮುಖ್ಯಸ್ಥರಿಗೆ ಪತ್ರ ಬರೆದು, ತನಿಖಾ ಸಂಸ್ಥೆಯಿಂದ ತಮಗೆ ನೋಟಿಸ್ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಆ ಮೂರು ಪುಟಗಳ ಪತ್ರದಲ್ಲಿ ಅವರು ಏನು ಬರೆದಿದ್ದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಹಲವು ಬಾರಿ ಹೇಳಿಕೊಂಡಿದ್ದರೂ, ಅಂದು ಸಿಐಡಿ ನೀಡಿದ್ದ ನೋಟಿಸ್‌ಗೆ ಉತ್ತರಿಸದೆ ಇದ್ದುದೇಕೆ? ಎಂದು ಪ್ರಶ್ನಿಸಿದರು.
ಇದೇ ವೇಳೆ ತಮ್ಮ ವಿರುದ್ಧ ಪ್ರಿಯಾಂಕ್ ಖರ್ಗೆ ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಈಗ ಸರ್ಕಾರ ಏನು ಮಾಡುತ್ತಿದೆ? ಇಂತಹ ವ್ಯಕ್ತಿ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಾನು ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆಯೇ ಮಾತನಾಡುತ್ತಿದ್ದೇನೆ ಎಂದರು.
ತಮ್ಮ ಆರೋಪಗಳಿಗೆ ದಾಖಲೆಗಳ ಮೂಲಕ ಸಮರ್ಥನೆ ನೀಡುವ ಉದ್ದೇಶದಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೀಡಿದ್ದ ನೋಟಿಸ್ ಹಾಗೂ ಅದಕ್ಕೆ ಅವರು ಸಲ್ಲಿಸಿದ್ದ ಉತ್ತರದ ಪ್ರತಿಗಳನ್ನು ಕುಮಾರಸ್ವಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.