ಚಿಕ್ಕಬಳ್ಳಾಪುರ: ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ರಾಜಕೀಯ ಭಿನ್ನಮತ ತಾರಕಕ್ಕೇರಿದೆ.
ಸ್ವಪಕ್ಷದ ಶಾಸಕ ಎಂಸಿ ಸುಧಾಕರ್ ಅವರ ವಿರುದ್ಧ ಗುರುವಾರ ಮತ್ತೆ ತೀವ್ರ ವಾಗ್ದಾಳಿ ನಡೆಸಿದ ಪ್ರದೀಶ್ ಈಶ್ವರ್ ಅವರು, "ಏನೇ ಆಗಲಿ Dictator, ನಿನ್ನ ವಿರುದ್ಧ ಸಮರ ನಿರಂತರ " ಎಂದು ಗುಡುಗಿದ್ದಾರೆ.
ಚಿಂತಾಮಣಿಯ Dictatorಗೆ ನಮಸ್ಕಾರ ಎಂದು ಎಂಸಿ ಸುಧಾಕರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರದೀಪ್ ಈಶ್ವರ್ ಅವರು, " ನಿಮ್ಮ ಎಲ್ಲಾ ಪದವಿಗಳನ್ನು ನಿಮ್ಮ ಸಂಬಂಧಿಕರಿಗೆ ಕೊಡುತ್ತೀರ " ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚಿಂತಾಮಣಿಯಲ್ಲಿ ದಲಿತರನ್ನು target ಮಾಡುತ್ತಿದ್ದೀರ, ಅಲ್ಪಸಂಖ್ಯಾತರನ್ನು target ಮಾಡುತ್ತಿದ್ದೀರ, ಹಿಂದುಳಿದವರನ್ನು target ಮಾಡುತ್ತಿದ್ದೀರ. ಬಲಿಜಿಗರ ಮುಖ ಕಂಡರೆ ನಿಮಗೆ ಆಗುವುದಿಲ್ಲ. ಕುರುಬರನ್ನು ನೀವು ಹತ್ತಿರಕ್ಕೂ ಸೇರಿಸುವುದಿಲ್ಲ. SC, ST ಗಳನ್ನು ತಿಂಗಳುಗಟ್ಟಲೆ ನೀವು ಭೇಟಿಯಾಗುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಎಲ್ಲಾ ಪದವಿಗಳನ್ನು ನಿಮ್ಮ ಸಂಬಂಧಿಕರಿಗೆ ಕೊಡುತ್ತೀರ. ಪ್ರತಿಯೊಂದು ಅನ್ಯ ಸಮುದಾಯವನ್ನು ಟಾರ್ಗೆಟ್ ಮಾಡುವ ನಿಮ್ಮ ನೀಚ ಮನಸ್ಥಿತಿಯನ್ನು ನಾನು ಧಿಕ್ಕರಿಸುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ನಿಮ್ಮದು.
ಪಕ್ಷದ ಹಿರಿಯರಾದ ಕೆ.ಎಚ್. ಮುನಿಯಪ್ಪ ಅವರನ್ನು ವಿನಾಕಾರಣ target ಮಾಡ್ತೀರ. ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಗೌಡರನ್ನು ವಿನಾಕಾರಣ target ಮಾಡ್ತೀರ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿದ್ದರೆ, ನನ್ನನ್ನೂ ವಿನಾಕಾರಣ target ಮಾಡ್ತೀರ.
ಮತ್ತೊಮ್ಮೆ ಹೇಳುತ್ತಿದ್ದೇನೆ, ಅಲ್ಪಸಂಖ್ಯಾತ, ದಲಿತ, ಹಿಂದುಳಿದವರ ವಿರೋಧಿ ನೀನು. ನಿನ್ನ ಸಂಬಂಧಿಕರನ್ನು ಬಿಟ್ಟು ಮತ್ಯಾರೂ ನಿನಗೆ ಬೇಕಾಗಿಲ್ಲ. ಏನೇ ಆಗಲಿ Dictator, ನಿನ್ನ ವಿರುದ್ಧ ಸಮರ ನಿರಂತರ.