ಮಂಡ್ಯ: ಸ್ಟಿಂಗ್ ಆಪರೇಷನ್ ವಿಷಯ ರಾಜ್ಯ ರಾಜಕೀಯದಲ್ಲಿ ಈಗ ಭಾರೀ ಸಂಚಲನ ಉಂಟುಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಹೆಚ್.ಡಿ. ಕುಮಾರಸ್ವಾಮಿ ಅವರ ರೀತಿಯಲ್ಲಿ ಪೆನ್ ಡ್ರೈವ್ ಪ್ರದರ್ಶಿಸಿ ಇನ್ನೊಂದು ವಾರದಲ್ಲಿ ಸ್ಟಿಂಗ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಶಾಸಕ ಗಣಿಗ ರವಿ ಸ್ಫೋಟಕ ಆರೋಪ ಮಾಡಿದ್ದಾರೆ. ಡಿಕೆಶಿ ಸಿಎಂ ಆದಮೇಲೆ ಅಭಿವೃದ್ಧಿ ಶರವೇಗ ಪಡೆದುಕೊಂಡಿದೆ. ಇದನ್ನು ಸಹಿಸದೆ ವಿಪಕ್ಷಗಳ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸಚಿವರೊಬ್ಬರು ಮತ್ತು ಕರ್ನಾಟಕದ ಬಿಜೆಪಿ ನಾಯಕರೊಬ್ಬರು ರಾಜ್ಯದ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ, ಸರ್ಕಾರಕ್ಕೆ ಮುಜುಗರ ಉಂಟುಮಾಡಲು ದೆಹಲಿ ಮೂಲದ ಏಜೆನ್ಸಿಯೊಂದಕ್ಕೆ ಸುಪಾರಿ ನೀಡಿದ್ದಾರೆ.
ಈ ಸಂಬಂಧ ಸಿಸಿಟಿವಿ ದೃಶ್ಯಗಳು, ಆಡಿಯೋ ಮತ್ತು ವಿಡಿಯೋ ದಾಖಲೆಗಳಿರುವ ಪೆನ್‌ಡ್ರೈವ್ ಪ್ರದರ್ಶಿಸಿದ ಗಣಿಗ ರವಿ, ಒಂದು ವಾರದೊಳಗೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ದೂರು ಕೂಡ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
10 ಸಚಿವರನ್ನು ಗುರಿಯಾಗಿಸಿ ಸ್ಟಿಂಗ್ ಆಪರೇಷನ್ ಮಾಡಲು ಪ್ರಯತ್ನಗಳು ನಡೆದಿವೆ. ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ಲಾನ್ ಅವರದ್ದಾಗಿದೆ. ಆದರೆ ನಮ್ಮ ಸಚಿವರು ಶುದ್ಧ ಹಸ್ತರಿದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್ ಮಾಡಿಸಲು ಸುಪಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು.
ಇದು ಹಿಟ್ ಆ್ಯಂಡ್ ರನ್ ಆಗಲ್ಲ, ಯಾವ ಏಜೆನ್ಸಿ, ಯಾರು ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾವ್ಯಾವ ನಾಯಕರ ಪಿಎಗಳಿದ್ರು ಎಂಬ ಎಲ್ಲಾ ದಾಖಲೆಗಳಿವೆ. ಸಿಸಿಟಿವಿ, ಆಡಿಯೋ, ವೀಡಿಯೋ ಸಮೇತ ದಾಖಲೆ ಇದೆ. ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ದರು. 1 ವಾರದೊಳಗೆ ತನಿಖಾಧಿಕಾರಿ ಮುಂದೆ ದಾಖಲೆ ಇಡುತ್ತೇವೆ. ಮಾಧ್ಯಮಗಳ ಮುಂದೆಯೂ ಎಲ್ಲಾ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಗಣಿಗ ರವಿ ಪೆನ್‌ಡ್ರೈವ್ ಪ್ರದರ್ಶಿಸಿದರು.