ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ʻಸ್ಟಿಂಗ್ ಆಪರೇಷನ್ʼಭಾರೀ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ಸಚಿವರೂ ಸೇರಿ 20 ರಿಂದ 25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರೋಕೆ ರೆಡಿ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸೋಮವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ವಿಜಯೇಂದ್ರ ಅವರು, ಅಧಿಕಾರಕ್ಕಾಗಿ ʻಸ್ಟಿಂಗ್ ಆಪರೇಷನ್ʼ ಮಾಡಿಸೋದು ರಾಜಕೀಯ ವ್ಯಭಿಚಾರ ಎಂದು ಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷದಲ್ಲೇ ಸಿಎಂ ಮೇಲೆ ವಿಶ್ವಾಸ ಹೋಗಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.
ನಾವು ಯಾರನ್ನೂ ಸೆಳೆಯುತ್ತಿಲ್ಲ. ಆದ್ರೆ ನಾಳೆಯೇ ಚುನಾವಣೆ ಘೋಷಣೆಯಾದರೆ 25 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಅದೂ ಸಚಿವರನ್ನು ಒಳಗೊಂಡು ಸೇರುತ್ತಾರೆ. ಅಂಥ ವಾತಾವರಣ ಈಗ ಇದೆ ಎಂದರು.
ಕಾಂಗ್ರೆಸ್ ನಲ್ಲಿ ಕೆಲವರು ಅಧಿಕಾರ ಕಸಿದುಕೊಳ್ಳಲು ಸ್ಟಿಂಗ್ ಮಾಡಿದ್ದಾರೆ ಅಂತ ಚರ್ಚೆ ನಡೀತಿದೆ. ಇನ್ನು ಕೆಲವರು ಸಚಿವರಾಗಲು, ಕೆಲವರು ಸಿಎಂ ಆಗಲು ಸ್ಟಿಂಗ್ ಮಾಡಿದ್ದಾರೆ ಅನ್ನೋ ಚರ್ಚೆ ನಡೆದಿದೆ. ಸ್ಟಿಂಗ್ ಆಪರೇಷನ್ ನಂತಹ ಬೆಳವಣಿಗೆ ಕರ್ನಾಟಕದ ರಾಜಕೀಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯಾರು ಯಾರ ವಿರುದ್ಧ ಸ್ಟಿಂಗ್ ಮಾಡಿದ್ದಾರೆ ಎಲ್ಲವೂ ಚರ್ಚೆ ಅಗುತ್ತಿದೆ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. 420 ಕೆಲಸ ಮಾಡಿದವರು ಅನುಭವಿಸುತ್ತಾರೆ. ಕರ್ನಾಟಕದ ರಾಜಕಾರಣ ಈ ಮಟ್ಟಕ್ಕೆ ಹೋಗಬಾರದಿತ್ತು, ದುರಾದೃಷ್ಟವಶಾತ್ ಹೋಗಿದೆ. ಸ್ಟಿಂಗ್ ಮಾಡೋದು ರಾಜಕೀಯ ವ್ಯಭಿಚಾರದ ಹಾಗೆ ಎಂದು ಕಿಡಿ ಕಾರಿದ್ದಾರೆ.