ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಎಲ್‌ಸಿ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ನಡೆಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಅಧಿಕೃತ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (NDA) ಸದಸ್ಯರು ಮುಖ್ಯ ಚುನಾವಣಾಧಿಕಾರಿ (CEO) ಅವರಿಗೆ ದೂರು ನೀಡಿದ್ದಾರೆ.
ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರೊಂದಿಗೆ ಸಲ್ಲಿಸಿದ ಪತ್ರದಲ್ಲಿ, ವಿಶೇಷವಾಗಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗಳ ಮೇಲೆ ಪುಟ್ಟಣ್ಣ ಅವರನ್ನು ಬೆಂಬಲಿಸುವಂತೆ ಮತ್ತು ಅವರಿಗೆ ಮತ ಹಾಕುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೈತ್ರಿಕೂಟದ ನಾಯಕರು ಆರೋಪಿಸಿದ್ದಾರೆ.
ಡಿಡಿಪಿಐಗಳು, ಡಿಡಿಪಿಯುಗಳು ಮತ್ತು ಬಿಇಒಗಳು ನಿರ್ದಿಷ್ಟ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತಿರುವುದು ಅಧಿಕೃತ ಅಧಿಕಾರದ ದುರುಪಯೋಗವಾಗುತ್ತದೆ. ಇದನ್ನು ಸಾಮಾನ್ಯ ರಾಜಕೀಯ ಪ್ರಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎನ್‌ಡಿಎ ಹೇಳಿದೆ.
ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿ ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಳ್ಳುವಂತೆ ಹಾಗೂ ಚುನಾವಣಾ ಪ್ರಚಾರದಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಮೈತ್ರಿಕೂಟವು ಸಿಇಒ ಅವರನ್ನು ಒತ್ತಾಯಿಸಿದೆ. ಮತದಾರರ ಮೇಲೆ ಪ್ರಭಾವ ಬೀರುವುದು ಅಥವಾ ಒತ್ತಡ ಹೇರುವುದು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಅಧಿಕೃತ ಸಭೆಗಳು, ವಾಟ್ಸ್‌ಆ್ಯಪ್ ಗುಂಪುಗಳು, ವಾಹನಗಳು, ಕಚೇರಿಗಳು ಮತ್ತು ಇತರ ಸರ್ಕಾರಿ ಸಂಪನ್ಮೂಲಗಳನ್ನು ಬಳಸುವುದನ್ನು ತಡೆಯಬೇಕು ಎಂದು ಮನವಿ ಮಾಡಿದೆ.
ಮತಯಾಚನೆ, ಬೆದರಿಕೆ ಹಾಗೂ ಅಧಿಕೃತ ಹುದ್ದೆಯ ದುರುಪಯೋಗಕ್ಕೆ ಸಂಬಂಧಿಸಿದ ದೂರುಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದೂ ಎನ್‌ಡಿಎ ಆಗ್ರಹಿಸಿದೆ. ಇಂತಹ ದೂರುಗಳನ್ನು ಅದೇ ಇಲಾಖೆಯ ಅಧಿಕಾರಿಗಳ ವ್ಯಾಪ್ತಿಗೆ ವಹಿಸುವ ಬದಲು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಇಂತಹ ಘಟನೆಗಳ ಬಗ್ಗೆ ದೂರು ನೀಡುವ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಗುರುತನ್ನು ಗೌಪ್ಯವಾಗಿಡಬೇಕು ಹಾಗೂ ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಮೈತ್ರಿಕೂಟವು ಒತ್ತಾಯಿಸಿದೆ. ದೂರು ನೀಡಿದವರ ವಿರುದ್ಧ ಕಿರುಕುಳ, ಅನಗತ್ಯ ತಪಾಸಣೆ, ವರ್ಗಾವಣೆ ಅಥವಾ ಇತರ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಸರ್ಕಾರಿ ಅಧಿಕಾರಿಗಳ ಒತ್ತಡ ಅಥವಾ ಪ್ರತಿಕೂಲ ಕ್ರಮಗಳ ಭಯವಿಲ್ಲದೆ ಶಿಕ್ಷಕರು ತಮ್ಮ ಮತದಾನದ ಹಕ್ಕನ್ನು ಸ್ವತಂತ್ರವಾಗಿ ಚಲಾಯಿಸುವಂತಾಗಬೇಕು ಎಂದು ಎನ್‌ಡಿಎ ಹೇಳಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ಖಚಿತಪಡಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.