ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸದ್ದು ಮಾಡುತ್ತಿರುವ ಸ್ಟಿಂಗ್ ಕಾರ್ಯಾಚರಣೆ ಭಾಗವಾಗಿ ವಿಡಿಯೊ ಹೊರಬಿದ್ದಿದೆ ಎಂಬ ಊಹಾಪೋಹಗಳ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತರದೆ ಧೈರ್ಯವಾಗಿ ಎದುರಿಸಿ ಹೋರಾಡಬೇಕಿತ್ತು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ತಮ್ಮ ಭೇಟಿಯ ವಿವರ ನೀಡಲು ನಿರಾಕರಿಸಿದ ಜಾರಕಿಹೊಳಿ, ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ನಾನು ಈಗ ಆ ಸ್ಟಿಂಗ್ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ನಾನು ಬೇರೆಯದೇ ವಿಚಾರವಾಗಿ ಅವರನ್ನು ಮಾತನಾಡಿಸಲು ಬಂದಿದ್ದೆ. ಇದು ಖಾಸಗಿ ಭೇಟಿ” ಎಂದಷ್ಟೇ ಹೇಳಿದರು.