

ಬೆಂಗಳೂರು: ನಾನು ಡಿ ಕೆ ಶಿವಕುಮಾರ್ ಅವರನ್ನು ಇಂದಿಗೂ ಮುಖ್ಯಮಂತ್ರಿ ಎಂದು ಹೇಳಲು ಸಿದ್ಧನಿಲ್ಲ, ನಮ್ಮ ರಾಜ್ಯಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು,
ನನ್ನ ತಾಯಿಯನ್ನೂ ಬಿಡಲಿಲ್ಲ ಇವರು, ದಿನಾ ದೇವರ ಕೋಣೆಯಲ್ಲಿ ಬದುಕಿದವರು ನನ್ನ ತಾಯಿ, ಅವರ ಬಗ್ಗೆಯೂ ಸರಣಿ ಕಥೆಗಳನ್ನು ಸೃಷ್ಟಿಸಿದಿರಿ, ನನಗೆ ಇಂಥಹ ಅವಸ್ಥೆ ಬರಬಾರದಾಗಿತ್ತು. ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ಕಸುಬೇ ಅಂತಹದ್ದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ರಾಜಕಾರಣಿಗಳ ವಿರುದ್ಧದ ಸ್ಟಿಂಗ್ ಆಪರೇಷನ್ ಗದ್ದಲ ಜೋರಿದ್ದು, ಈ ನಡುವೆ ವಿಡಿಯೋ ಪ್ರಸಾರ ತಡೆ ಕೋರಿ ಮಾಜಿ ಸಿಎಂ ಸಿದ್ದರಾಮಯ್ಯ ಕೋರ್ಟ್ ಮೊರೆಹೋಗಿದ್ದಾರೆ. ದೇವರಾಜ ಅರಸು ಅವರ ದಾಖಲೆ ಮುರಿದು ಈ ರಾಜ್ಯದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿದ್ದವರು, ಈ ರಾಜ್ಯದ ಅತಿದೊಡ್ಡ ಅಹಿಂದ ನಾಯಕ ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಈ ಗತಿಗೆ ತಂದಿದ್ದೀರಿ ಎಂದು ಅನುಕಂಪ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಕ್ಕ ಬೆಲೆ
ಸುದೀರ್ಘ ಕಾಲ ಆಡಳಿತ ನಡೆಸಿದ ಅನುಭವವಿರುವ ಸಿದ್ದರಾಮಯ್ಯನವರು ಕೋರ್ಟ್‌ಗಳಿಂದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಲ್ಲಬೇಕು. ಅಹಿಂದ ನಾಯಕರು ಇಂತಹ ಕೆಟ್ಟ ಬೆಳವಣಿಗೆಗಳನ್ನು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ಹೋರಾಟ ಮಾಡಿ, ಉನ್ನತ ತನಿಖೆ ನಡೆಸಿ ಎಂದರು.
ಮುಖ್ಯಮಂತ್ರಿಯಾಗಿ ನಿಮ್ಮ ನಡೆ ಇನ್ನೂ ಸ್ಪಷ್ಟತೆ ಇಲ್ಲ, ಈ ಸ್ಟಿಂಗ್ ಆಪರೇಷನ್ ವಿಷಯವನ್ನು ಸಿಬಿಐ ತನಿಖೆಗೆ ವಹಿಸಬೇಕು, ಈ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು. ರಾಜಕೀಯವಾಗಿ ನನಗೂ ಸಿದ್ದರಾಮಯ್ಯನವರಿಗೂ ಹಿಂದೆ ಸಾಕಷ್ಟು ಭಿನ್ನಾಭಿಪ್ರಾಯ ಬಂದಿರಬಹುದು, ಆದರೆ ನನಗೆ ಅವರ ಮೇಲೆ ನಂಬಿಕೆಯಿದೆ, ನಿಮ್ಮ ಹಳೆಯ ಅಹಿಂದ ಧ್ವನಿ ಹೊರಗೆ ಬರಬೇಕು ಎಂದು ಸಿದ್ದರಾಮಯ್ಯ ಪರ ಮಾತನಾಡಿದರು.