ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರ ಮಟ್ಟಕ್ಕೆ ಹೋಗಿದೆ.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಗೆ ಮಂತ್ರಿಗಿರಿ ಕೊಡಿಸಲು, ತಮಗೆ ಮತ್ತೊಮ್ಮೆ ರಾಜ್ಯಸಭೆ ಸೀಟು ಕೊಡಿಸಲು ಮೋದಿ ಅವರ ಮನೆಗೆ ಹೋಗಿ ಬೇಡಿಕೊಂಡಿದ್ದರು. ನೀವು ಹೊಂದಾಣಿಕೆ ಹಾಗೂ ಅವಕಾಶವಾದಿ ರಾಜಕೀಯ ಮಾಡುತ್ತೀರಿ. ಒಂದು ಬಾರಿ ನಮ್ಮ ಜೊತೆ ಬರ್ತೀರಿ. ಮತ್ತೊಂದು ಬಾರಿ ಅವರ ಜೊತೆಗೆ ಹೋಗ್ತೀರಿ. ಆರ್ ಎಸ್ ಎಸ್ ವಿಷ ಸರ್ಪ ಅಂತ ಲೇಖನವನ್ನೂ ಬರಿತೀರಿ’ ಎಂದು ಕುಟುಕಿದರು.
ರಾಜಕೀಯದ ಘನತೆಯನ್ನು ಕುಗ್ಗಿಸುತ್ತಿರುವವರು ಯಾರು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ. ದಲಿತ ಸಮುದಾಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದರಿಂದ ವೈಯಕ್ತಿಕವಾಗಿ ತಮಗೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ, ಇಂತಹ ಹೇಳಿಕೆಗಳು ಅವುಗಳನ್ನು ನೀಡುವವರ ಭಾಷೆ, ಚರ್ಚೆಯ ಮಟ್ಟ ಮತ್ತು ಮನಸ್ಥಿತಿಯನ್ನು ಬಹಿರಂಗಪಡಿಸುತ್ತವೆ ಎಂದರು.
ನಿಮ್ಮಂತೆ ನಾವು ರಾಜಕೀಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ ಪ್ರಿಯಾಂಕ್ ಖರ್ಗೆ, ತಮ್ಮ ವಿರುದ್ಧ ಆರೋಪ ಮಾಡುವವರು ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ವೆಸ್ಟ್ ಎಂಡ್ ಹೋಟೆಲ್ನಲ್ಲಿ ಏನೇನ್ ಮಾಡಿದ್ರಿ?
ಕುಮಾರಸ್ವಾಮಿ ಕುಟುಂಬದ ಒಂದೊಂದು ರೂಪಾಯಿಯ ದಾಖಲೆಗಳು ನಮ್ಮ ಬಳಿ ಇದೆ. ಐಟಿ, ಇಡಿ ನಿಮ್ಮ ಬಳಿಯೇ ಇದೆಯಲ್ಲ ಯಾಕೆ ರೇಡ್ ಮಾಡಿಸ್ತಿಲ್ಲ? ದಲಿತ ಬಲಿತ ಅಂದರೆ ಏನ್ರೀ ಅರ್ಥ ನಿಮ್ದು? ನೀವು ಮಾತ್ರ ಉದ್ದಾರ ಆಗ್ಬೇಕಾ ? ದಲಿತರು ಉದ್ಧಾರ ಆಗಬಾರದಾ? ನೀವು ಏನೇನು ವಂಚನೆ ಮಾಡಬೇಕಾಗಿತ್ತು ಎಲ್ಲವೂ ಮಾಡಿದ್ದೀರಾ, ವೆಸ್ಟ್ ಎಂಡ್ ಹೋಟೆಲ್ನಲ್ಲಿ ಏನೇನು ಮಾಡಬೇಕಿತ್ತೋ ಮಾಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಹಿಂದೆ ಆರ್ಎಸ್ಎಸ್ ವಿರುದ್ಧ ಟೀಕೆಗಳನ್ನು ಬರೆಯುತ್ತಿದ್ದವರು ಈಗ ಆರ್ಎಸ್ಎಸ್ನ ‘ಚಡ್ಡಿ’ ಧರಿಸಿಕೊಂಡು ತಿರುಗುತ್ತಿದ್ದಾರೆ. ಅವರು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆ. “ತಮ್ಮ ಮನೆಯವರಿಗೇ ಸತ್ಯ ಹೇಳದವರು ಸಾರ್ವಜನಿಕವಾಗಿ ಸತ್ಯ ಹೇಳುತ್ತಾರೆಂದು ಹೇಗೆ ನಿರೀಕ್ಷಿಸಲು ಸಾಧ್ಯ?” ಎಂದು ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ನಲ್ಲಿ ಸಚಿವರ ಕೈವಾಡವಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು. ಕುಮಾರಸ್ವಾಮಿ ಅವರೊಂದಿಗೆ ಹಿಂದಿನಿಂದಲೂ ವೈಮನಸ್ಸು ಇರುವ ಹಿನ್ನೆಲೆಯಲ್ಲಿ, ಈ ಕಾರ್ಯಾಚರಣೆಯ ಹಿಂದೆ ಅವರೇ ಇರಬಹುದೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.
ಕೆಪಿಎಸ್ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕುರಿತು ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ವಾಸ್ತವಾಂಶಗಳಿವೆ. ಆರೋಪ ಮಾಡುವವರು ಮೊದಲು ಅಫಿಡವಿಟ್ ಓದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಅದನ್ನು ಪರಿಶೀಲಿಸಿದರೆ ಸರ್ಕಾರದ ನಿಲುವು ಸ್ಪಷ್ಟವಾಗಲಿದೆ ಎಂದು ಹೇಳಿದರು.
ವಿಜಯದಶಮಿಯಂದು ಆರ್ಎಸ್ಎಸ್ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಥಸಂಚಲನದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಆಯೋಜಕರು ಪಥಸಂಚಲನದ ನಿರ್ದಿಷ್ಟ ಮಾರ್ಗ ಸೇರಿದಂತೆ ಅಗತ್ಯವಿರುವ ಎಲ್ಲ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಪರಿಶೀಲಿಸಿದ ಬಳಿಕ ಕಾನೂನಿನ ಪ್ರಕಾರ ಅನುಮತಿ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಲಬುರಗಿಯಲ್ಲಿ ಬಂದು ಸ್ಪರ್ಧಿಸಲಿ
ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಕ್ಷೇತ್ರಗಳಿಂದ ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಸಾಮಾನ್ಯ ಕ್ಷೇತ್ರಗಳಿಂದ ದಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಷ್ಟು ನಮ್ಮ ಸಮಾಜ ಪ್ರಬುದ್ಧವಾಗಿದೆಯೇ ಎಂದು ಪ್ರಶ್ನಿಸಿದರು.
ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಡಲಿಲ್ಲ. ದಲಿತ ನಾಯಕ, ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಅಲ್ಲಿ ಶುದ್ಧೀಕರಣ ವಿಧಿವಿಧಾನ ನಡೆಸಲಾಯಿತು. ದಲಿತರು ತಮಗೆ ಮೀಸಲಾದ ಕ್ಷೇತ್ರಗಳಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುವುದು ನಮ್ಮ ಸಮಾಜದ ಮನಸ್ಥಿತಿಯಾಗಿದೆ, ಹಾಗಾದರೆ ಕುಮಾರಸ್ವಾಮಿಯವರು ಕಲಬುರಗಿಯಲ್ಲಿ ಸ್ಪರ್ಧಿಸಿ ತೋರಿಸಲಿ ಎಂದು ಸವಾಲು ಹಾಕಿದರು.