ಬೆಂಗಳೂರು: ‘ಮತಪತ್ರವಿರಲಿ ಅಥವಾ ಇವಿಎಂ ಇರಲಿ, ಜನರ ಆಯ್ಕೆ ಮಾತ್ರ ಸ್ಪಷ್ಟವಾಗಿದೆ’ ಎಂದು ವಿಧಾನ ಪರಿಷತ್ನ ನಾಲ್ಕೂ ಸ್ಥಾನಗಳನ್ನು ಎನ್ಡಿಎ ಮೈತ್ರಿಕೂಟ ಗೆದ್ದ ಬಳಿಕ ಬಿಜೆಪಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ. ಆಡಳಿತಾರೂಢ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
ವಿದ್ಯುನ್ಮಾನ ಮತಯಂತ್ರಗಳು (EVM), ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತ್ತಿತರ ವಿಷಯಗಳ ಕುರಿತು ದೀರ್ಘಕಾಲದಿಂದ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಈ ಪೋಸ್ಟ್ ಮಾಡಿದೆ. ಈ ಬಾರಿ ಎನ್ಡಿಎ ಅಭ್ಯರ್ಥಿಗಳ ಗೆಲುವು ಗಮನಾರ್ಹವಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ನ ಎ.ಪಿ. ರಂಗನಾಥ್ ಅವರು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ನ ಪುಟ್ಟಣ್ಣ ಅವರಿಗಿಂತ ಸುಮಾರು 200 ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಹಿನ್ನಡೆಯಲ್ಲಿದ್ದರು. ಆದರೆ, ನಾಲ್ಕನೇ ಸುತ್ತಿನ ಬಳಿಕ ಈ ಹಿನ್ನಡೆಯನ್ನು ಮೆಟ್ಟಿನಿಂತು ಸುಮಾರು 1,000 ಪ್ರಥಮ ಪ್ರಾಶಸ್ತ್ಯದ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ನಾಲ್ಕು ಕ್ಷೇತ್ರಗಳ ಪೈಕಿ ಅತಿ ದೊಡ್ಡ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ. ಸುರೇಶ್ ಕಾಂಗ್ರೆಸ್ನ ಶಶಿ ಹುಲಿಕುಂಟೆಮಠ ಅವರನ್ನು ಸುಮಾರು 24,000 ಮತಗಳ ಭಾರಿ ಅಂತರದಿಂದ ಸೋಲಿಸಿದರು.
ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರ ಅವರು 9,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶೀಲ್ ನಮೋಶಿ ಶರಣಪ್ಪ ಮತ್ತೂರು ಅವರನ್ನು ಮತ್ತೊಮ್ಮೆ ಸೋಲಿಸಿದರು. ಆರು ವರ್ಷಗಳ ಹಿಂದೆಯೂ ನಮೋಶಿ ಅವರು ಮತ್ತೂರು ವಿರುದ್ಧ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಪರವಾಗಿ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸಮರ್ಥನೆ ನೀಡಿದರು.
ಈ ಕ್ಷೇತ್ರಗಳಲ್ಲಿ ಕಳೆದ 30–40 ವರ್ಷಗಳಿಂದ ಚುನಾವಣೆಗಳು ನಡೆಯುತ್ತಿವೆ. ಹಿಂದಿನ ಆರೇಳು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಮತಗಳನ್ನು ಪಡೆದಿದೆ ಎಂದು ಹೇಳಿದರು.
ಹಿಂದಿನ ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಆದರೆ, ಈ ಬಾರಿ ನೇರ ಹಣಾಹಣಿ ನಡೆದಿತ್ತು. ಕಾಂಗ್ರೆಸ್ ವಿರೋಧಿ ಎರಡು ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿದ ಪರಿಣಾಮ ಇದು ಎಂದು ವಿಶ್ಲೇಷಿಸಿದರು.
ಪದವೀಧರರು ಮತ್ತು ಶಿಕ್ಷಕರಂತಹ ವಿದ್ಯಾವಂತ ಹಾಗೂ ಸಂಘಟಿತ ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಾದರೂ ಬಿಜೆಪಿ–ಜೆಡಿಎಸ್ ಮೈತ್ರಿಯು ಎರಡೂ ಪಕ್ಷಗಳ ಪ್ರತ್ಯೇಕ ಮತ ಬಲವನ್ನು ಒಗ್ಗೂಡಿಸಿ ಗೆಲುವು ಸಾಧಿಸಬಲ್ಲದು ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ. ಆದರೆ, ಇದೇ ಕಾರ್ಯತಂತ್ರ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿಯೂ ಫಲ ನೀಡಬಹುದೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಪಾಲಿಗೆ ಮತಗಳ ಪ್ರಮಾಣ ಹೆಚ್ಚಾದರೂ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದಿರುವುದು ಅತ್ಯಂತ ನಿರಾಸೆ ಮೂಡಿಸಿದೆ. ಪಕ್ಷದ ಬೆಂಬಲದ ನೆಲೆ ವಿಸ್ತಾರವಾಗುತ್ತಿದ್ದರೂ, ಒಗ್ಗಟ್ಟಾಗಿರುವ ವಿರೋಧ ಪಕ್ಷಗಳನ್ನು ಸೋಲಿಸುವಷ್ಟು ವೇಗವಾಗಿ ಅದು ಬೆಳೆಯುತ್ತಿಲ್ಲ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ.
ಬಿಜೆಪಿಯ ರವಿಕುಮಾರ್, ‘ಈ ಫಲಿತಾಂಶವು ರಾಜ್ಯ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬವಾಗಿದೆ’ ಎಂದು ಟೀಕಿಸಿದರು.
ಕಾಂಗ್ರೆಸ್ ಪಡೆದ ಮತಗಳ ಸಂಖ್ಯೆ ಹೆಚ್ಚಿರುವ ಕುರಿತು ಕೇಳಿದಾಗ ಅದನ್ನು ಒಪ್ಪಿಕೊಂಡ ಅವರು, ‘ಹೌದು, ಆದರೂ ಗೆದ್ದಿದ್ದು ನಾವೇ ಅಲ್ಲವೇ?’ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ, ಈ ಫಲಿತಾಂಶಗಳು 2028ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಆದರೆ, ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ‘ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಅತ್ಯಂತ ಸೀಮಿತ ಸಂಖ್ಯೆಯ, ನಿರ್ದಿಷ್ಟ ವರ್ಗಕ್ಕೆ ಸೇರಿದ ಹಾಗೂ ಸ್ವಯಂ ನೋಂದಾಯಿಸಿಕೊಂಡ ಮತದಾರರು ನಿರ್ಧರಿಸುತ್ತಾರೆ. ಈ ಮತದಾರರು ಹಳೆ ಮೈಸೂರು, ಕಲ್ಯಾಣ ಕರ್ನಾಟಕ ಅಥವಾ ಮುಂಬೈ ಕರ್ನಾಟಕ ಭಾಗದ ಸಾಮಾನ್ಯ ಮತದಾರರಿಗಿಂತ ಸಂಪೂರ್ಣ ಭಿನ್ನವಾಗಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಗೆ ಇನ್ನೂ 21 ತಿಂಗಳು ಬಾಕಿಯಿದೆ. ಕರ್ನಾಟಕದ ರಾಜಕೀಯದಲ್ಲಿ ಇದು ಬಹಳ ದೀರ್ಘ ಅವಧಿ ಎಂದೂ ಅವರು ಅಭಿಪ್ರಾಯಪಟ್ಟರು.
ದೇಶದ ವಿವಿಧ ಭಾಗಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಎರಡೂ ರಾಜಕೀಯ ಬಣಗಳು ಮಿಶ್ರ ಫಲಿತಾಂಶಗಳನ್ನು ಪಡೆದಿವೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭದ್ರಕೋಟೆಯಾದ ವಾರಾಣಸಿಯಲ್ಲಿ ವಿಧಾನ ಪರಿಷತ್ನ ಎರಡೂ ಸ್ಥಾನಗಳನ್ನು ಕಳೆದುಕೊಂಡಿರುವುದನ್ನು ಬಿಜೆಪಿ ಹೇಗೆ ವಿವರಿಸುತ್ತದೆ? ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ರಾಷ್ಟ್ರಮಟ್ಟದ ರಾಜಕೀಯ ಮನಸ್ಥಿತಿಯ ದಿಕ್ಸೂಚಿಯಾಗಿದ್ದರೆ, ಕರ್ನಾಟಕದ ಫಲಿತಾಂಶದ ಜತೆಗೆ ವಾರಾಣಸಿಯ ಫಲಿತಾಂಶವನ್ನೂ ಬಿಜೆಪಿ ಒಪ್ಪಿಕೊಳ್ಳಬೇಕಾಗುತ್ತದೆಯಲ್ಲವೇ ಎಂದು ಅವರು ಪ್ರಶ್ನಿಸಿದರು.
ಗೆದ್ದಾಗ ಈ ಚುನಾವಣೆಗಳನ್ನು ಜನಾಭಿಪ್ರಾಯ ಸಂಗ್ರಹವೆಂದು ಬಿಂಬಿಸುವುದು, ಸೋತಾಗ ಸ್ಥಳೀಯ ಕಾರಣಗಳಿಂದ ಉಂಟಾದ ಫಲಿತಾಂಶವೆಂದು ತಳ್ಳಿಹಾಕುವುದು ರಾಜಕೀಯ ಪಕ್ಷಗಳಿಗೆ ಸರಿಯಲ್ಲ ಎಂದು ಹೇಳಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಬಿ.ಎಸ್. ಮೂರ್ತಿ, ಪುಟ್ಟಣ್ಣ ಅವರ ವಿರುದ್ಧ ಈ ಹಿಂದೆ ಎರಡು ಬಾರಿ ಸೋತಿದ್ದ ರಂಗನಾಥ್ ಅವರಿಗೆ ಈ ಬಾರಿ ಅನುಕಂಪದ ಅಂಶ ನೆರವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ಈ ಫಲಿತಾಂಶವು ಮೈತ್ರಿಯ ಮತ ಲೆಕ್ಕಾಚಾರ ಫಲ ನೀಡುತ್ತದೆ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು ಸಾಧ್ಯವಿದೆ ಎಂಬ ಸಂದೇಶ ನೀಡಿದೆ.
ಆದರೆ, ಕಾಂಗ್ರೆಸ್ ಪಾಲಿಗೆ ಈ ಫಲಿತಾಂಶ ನೀಡಿರುವ ಪಾಠ ಹೆಚ್ಚು ಕಠಿಣವಾಗಿದೆ. ಮತಗಳ ಪ್ರಮಾಣ ಹೆಚ್ಚಾಗುವುದೊಂದೇ ಗೆಲುವಿನ ಕಾರ್ಯತಂತ್ರವಾಗುವುದಿಲ್ಲ. ಪಕ್ಷವು ತನ್ನ ಎದುರಾಳಿಗಳ ಮೈತ್ರಿಯನ್ನು ಒಡೆಯಬೇಕು ಅಥವಾ ತನ್ನದೇ ಬೆಂಬಲದ ನೆಲೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ.
ಕೆಲವೇ ಲಕ್ಷ ವಿದ್ಯಾವಂತ ಮತದಾರರು ನಿರ್ಧರಿಸಿದ ನಾಲ್ಕು ಸ್ಥಾನಗಳಲ್ಲಿನ ಗೆಲುವು, ಯಾವ ರಾಜಕೀಯ ಬಣ ಹೆಚ್ಚು ಸಂಘಟಿತವಾಗಿದೆ ಎಂಬುದನ್ನು ಮಾತ್ರ ತೋರಿಸುತ್ತದೆ. 2028ರಲ್ಲಿ ಕರ್ನಾಟಕದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಈ ಫಲಿತಾಂಶ ನಿರ್ಧರಿಸುವುದಿಲ್ಲ.