ಬೆಂಗಳೂರು: ಅಧಿಕಾರ ಇದ್ದಾಗ ರೈತರ ಹಿತ ಕಾಯದೆ ಇದೀಗ ನಕಲಿ ಹೋರಾಟದ ಮೂಲಕ ಪುನಃ ಅಧಿಕಾರ ಹಿಡಿಯುತ್ತೇವೆ ಎನ್ನುವ ಬಿ.ವೈ. ವಿಜಯೇಂದ್ರ ಅವರ ಕನಸು ನನಸಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಯುವ ಕಾಂಗ್ರೆಸ್ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಈಸೂರು ಗ್ರಾಮದಿಂದ ಪಟ್ಟಣದವರೆಗೆ ಆಯೋಜಿಸಿದ್ದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ. ತಾಲ್ಲೂಕಿನಲ್ಲಿ ಬಗರ್ ಹುಕುಂ ಸಭೆಯನ್ನೂ ನಡೆಸಿಲ್ಲ.
ವಿವಿಧ ಕಾಯ್ದೆಗಳ ನೆಪದಲ್ಲಿ ರೈತರ ಭೂಮಿ ಕಸಿದುಕೊಂಡಿರುವುದು ಹಾಗೂ ಅರಣ್ಯ ಹಕ್ಕು ಕಾಯ್ದೆಯ ಲಕ್ಷಾಂತರ ಅರ್ಜಿ ತಿರಸ್ಕರಿಸಿರುವ ಕೀರ್ತಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ. ತಾಲ್ಲೂಕಿನ ಬಗರ್ ಹುಕುಂ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿರುವ ಅವರಿಗೆ ರಾಜ್ಯ ಸರ್ಕಾರದ ಕುರಿತು ಆರೋಪಿಸುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಯಾವುದೇ ಕಾರಣಕ್ಕೂ ನಾವು ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಜನರ ಪರವಾಗಿ ನಿಲ್ಲುವುದು ನನ್ನ ಕರ್ತವ್ಯವೆಂದು ಭಾವಿಸಿ ನಾನು ಶಿಕಾರಿಪುರಕ್ಕೆ ಬಂದಿದ್ದೇನೆ ಎಂದು ಹೇಳಿದರು.
ದೇವರಾಜ ಅರಸು ಬಡವರಿಗೆ ಭೂಮಿಯ ಹಕ್ಕು ನೀಡಿದರು. ಎಸ್. ಬಂಗಾರಪ್ಪ ಆಶ್ರಯ ಮನೆ, ಬೋರ್‌ವೆಲ್‌ಗೆ ಉಚಿತ ವಿದ್ಯುತ್ ನೀಡಿದರು. ಅದರ ಫಲವಾಗಿ ಈಗ ಜಿಲ್ಲೆಯಲ್ಲಿ ಸಾವಿರಾರು ಬೋರ್‌ವೆಲ್ ಆಗಿದ್ದು, ರೈತರು ಅಡಿಕೆ ಬೆಳೆದು ಸ್ವಾವಲಂಬಿಗಳಾಗಿದ್ದಾರೆ. ಇದನ್ನು ಜನ ಗಮನಿಸಬೇಕು ಎಂದರು.
ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಹ ಸ್ಥಿತಿ ಶಿಕಾರಿಪುರ ಜನತೆಯದ್ದು, ಇಲ್ಲಿನ ಶಾಸಕರು ಜನತೆಯ ದಾರಿ ತಪ್ಪಿಸುವಂತ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಸಹೋದರರೇ ಸಂಸದರಾಗಿದ್ದು ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿಲ್ಲ.
ಇದೀಗ ಹೋರಾಟ ನಡೆಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತ ಚರ್ಚೆಗೆ ರಾಜ್ಯ ಸರ್ಕಾರ ಸೆ.21ರಿಂದ 3 ದಿನಗಳ ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿ ಜನರ ಪರವಾಗಿ ನಿರ್ಣಯ ಕೈಗೊಳ್ಳಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಪರ ಆಡಳಿತ ಹಾಗೂ ಯೋಜನೆಗಳನ್ನು ನೀಡಿದೆ. ಬಿಜೆಪಿ ಮಾತಿನಲ್ಲಿ ಮಾತ್ರ ಜನಹಿತ ಕಾಯುತ್ತದೆ ಎಂದು ಟೀಕಿಸಿದರು.
ರೈತರ ಪಾದಯಾತ್ರೆಗೆ ಈಸೂರು ಗ್ರಾಮಸ್ಥರು ಹಬ್ಬದ ಮೆರುಗು ನೀಡಿದ್ದಾರೆ. ರೈತರು, ಬಡವರ ಹಿತ ಕಾಯುವಲ್ಲಿ ಬಿಜೆಪಿ ವಿಫಲವಾಗಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪಕ್ಷ ಸಂಘಟಿಸಿ, ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ನನ್ನ ಸಾಮರ್ಥ್ಯ ಸಾಬೀತುಪಡಿಸುತ್ತೇನೆ. ನಾನು ಬಿಜೆಪಿ ಏಜೆಂಟ್ ಎನ್ನುವರಿಗೆ ತಕ್ಕ ಉತ್ತರ ನೀಡುತ್ತೇನೆ’ ಎಂದು ಮುಖಂಡ ಎನ್.ವಿ. ಈರೇಶ್ ಹೇಳಿದರು.