ರಾಮನಗರ: ಟಿ.ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಬಾಲಕೃಷ್ಣ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.
ಇನ್ಸ್‌ಪೆಕ್ಟರ್ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಗಣೇಶ ಮೂರ್ತಿ ಪ್ರತಿಷ್ಠಾಪನೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ನಿಯಮಗಳನ್ನು ಜವಾಬ್ದಾರಿಯಿಂದ ಪಾಲಿಸಿ ಎಂದು ಇನ್ಸ್‌ಪೆಕ್ಟರ್ ಹೇಳಿದ್ದರು. ಆದರೆ, ಅದನ್ನು ಯಾರೋ ಕಟ್ ಅಂಡ್ ಪೇಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿದ್ದಾರೆ.
ಸಂಘರ್ಷ ಆಗಬಾರದು ಎಂಬುದು ಪೊಲೀಸ್ ಇಲಾಖೆಯ ಉದ್ದೇಶವೇ ಹೊರತು ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಅನ್ಯ ಧರ್ಮೀಯರು ಆರ್.ಅಶೋಕ್ ಹಾಗೂ ಪ್ರತಾಪ್ ಸಿಂಹ ಮನೆ ಮುಂದೆ ಬಂದು ಪಟಾಕಿ ಹೊಡೆದರೆ, ಡಿಜೆ ಹಾಕಿದರೆ ನೀವು ಸುಮ್ಮನಿರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಅಥವಾ ಮುಸ್ಲಿಂ ಸಮುದಾಯದವರು ಹಿಂದೂ ದೇವಾಲಯದ ಮುಂದೆ ಬಂದು ಪಟಾಕಿ ಹೊಡೆದರೆ ಸಹಿಸಿಕೊಳ್ಳುತ್ತೀರಾ? ಪ್ರತಿಯೊಬ್ಬರಿಗೂ ಕಾನೂನು ಒಂದೇ ಅಲ್ಲವೇ? ಅನ್ಯ ಧರ್ಮದವರ ಮನೆ ಮುಂದೆ ಹೋಗಿ ಪಟಾಕಿ ಹೊಡೆಯುವ ಅವಶ್ಯಕತೆ ಏನಿದೆ? ಸರ್ಕಾರವನ್ನು ಎದುರಿಸಲು ಯಾವುದೇ ಸೂಕ್ತ ವಿಚಾರಗಳಿಲ್ಲದೆ ವಿರೋಧ ಪಕ್ಷವಾದ ಬಿಜೆಪಿ ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟುಮಾಡುತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ