ಮಂಗಳೂರು: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಿಂದ ಕರಾವಳಿ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸಚಿವರು ಕೇವಲ ಮೀನು ಊಟ ಸವಿಯಲು ಮಂಗಳೂರಿಗೆ ತೆರಳಿದ್ದರು ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಅವರ ಟೀಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಶನಿವಾರ ಬೆಳಗ್ಗೆ ಮಂಗಳೂರಿನ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಈಗ ನಾನ್‌ವೆಜ್ ತಿನ್ನುವುದಿಲ್ಲ. ಅಶೋಕಣ್ಣನಿಗೆ ಇಲ್ಲಿಂದಲೇ ತಾಜಾ ಮೀನು ಕಳುಹಿಸಿಕೊಡುತ್ತೇನೆ’ ಎಂದು ಹೇಳಿದ್ದಾರೆ.
ಬಳಿಕ ಖುದ್ದು ಬೋಟ್ ಹತ್ತಿ ಸಮುದ್ರ ಮತ್ತು ಅಳಿವೆಬಾಗಿಲಿಗೆ ತೆರಳಿದ ಅವರು, ಇತ್ತೀಚೆಗೆ ಹೂಳು ತುಂಬಿ ಬೋಟ್ ಮುಳುಗಡೆಯಾಗಿದ್ದ ದುರಂತ ಸ್ಥಳವನ್ನು ವೀಕ್ಷಿಸಿದರು.
ಬೋಟ್‌ಗಳು ಹೂಳಿನಲ್ಲಿ ಸಿಲುಕಿಕೊಳ್ಳುತ್ತಿರುವ ಕುರಿತು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಮೀನುಗಾರಿಕಾ ಸಂಘಟನೆಗಳ ಸದಸ್ಯರು ವಿವರಿಸಿದರು. ಸಮಸ್ಯೆಯ ಗಂಭೀರತೆಯನ್ನು ಅರಿತ ಡಿಕೆ ಶಿವಕುಮಾರ್, ಡ್ರೆಡ್ಜಿಂಗ್‌ಗೆ ಅಗತ್ಯ ಕ್ರಮ ಕೈಗೊಂಡು ಪರಿಹಾರ ಒದಗಿಸುವ ಭರವಸೆ ನೀಡಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಸ್ವಂತ ಡ್ರೆಡ್ಜಿಂಗ್ ಯಂತ್ರ ಖರೀದಿಸುವ ಅಥವಾ ಗುತ್ತಿಗೆ ಆಧಾರದ ಮೇಲೆ ಪಡೆಯುವ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.