ಮದ್ದೂರು: ಗಣೇಶ ಮೂರ್ತಿ ಸೇರಿದಂತೆ ಶ್ರದ್ಧಾಭಕ್ತಿಯಿಂದ ಪೂಜಿಸುವ ಹಲವು ದೇವರುಗಳನ್ನು ವಿಪಕ್ಷದವರು ರಾಜಕೀಯಕ್ಕೆ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್‌ನಿಂದ ಶನಿವಾರ ರಾತ್ರಿ ನಡೆದ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಯಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಬದಲಾವಣೆ ಪರ್ವ ಆರಂಭವಾಗಿದೆ, ನಾವು ಅಭಿವೃದ್ಧಿ ಮಾಡಿ ವೋಟ್ ಕೇಳಿತ್ತೇವೆ, ನಿಮ್ಮೆಲ್ಲರ ಆಶೀರ್ವಾದ ನಮ್ಮ ಹಾಗೂ ಉದಯ್ ಮೇಲೆ ಇರಲಿ ಎಂದು ಹೇಳಿದರು.
ಗಣೇಶ ಮೂರ್ತಿ ವಿಚಾರವನ್ನು ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದ್ಯಾವುದೇ ಲಾಭ ಅವರಿಗೆ ಫಲಿಸುವುದಿಲ್ಲ. ಜನರು ಬುದ್ಧಿವಂತರಿದ್ದಾರೆ. ಅವರ ಎಲ್ಲಾ ನಡುವಳಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಅಭಿವೃದ್ಧಿ ವಿಚಾರವನ್ನು ಬಿಟ್ಟು ಬಿಜೆಪಿಯವರು ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಆ ಪಕ್ಷಕ್ಕೆ ಹೊಸದಲ್ಲ. ನಾಡಿನ ಜನರು ಬಿಜೆಪಿಯ ಕುತಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ. ಜನರು ಕೋಮು ಸೌಹಾರ್ದವನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯವನ್ನು ಅಭಿವೃದ್ಧಿ ಮಾಡಿ ನಾವು ಜನರಲ್ಲಿ ಮತಯಾಚನೆ ಮಾಡುತ್ತಿದ್ದೇವೆ ಹೊರತು ಜನರನ್ನು ಮರಳು ಮಾಡಿ ಮತ ಕೇಳುತ್ತಿಲ್ಲ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕ ಕೆ.ಎಂ.ಉದಯ್ ಆಸೆಯಂತೆ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ಬಯಕೆ ಹೊಂದಿದ್ದಾರೆ. ಇದಕ್ಕೆ ಸಚಿವ ಸಂಪುಟದ ಎಲ್ಲಾ ಸಚಿವರು ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ ಎಂದರು. ಹೆಚ್ಚಿನ ಅಭಿವೃದ್ಧಿ ದೃಷ್ಟಿಯಿಂದ ಮದ್ದೂರು ಕ್ಷೇತ್ರದ ಜನರು ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.