ಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸತ್ಯಾಸತ್ಯತೆ ಹೊರಬರಬಾರದು ಎಂದು ಡಿಕೆ.ಶಿವಕುಮಾರ್ ಅವರ ಸರ್ಕಾರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಂಚು ರೂಪಿಸುತ್ತಿದೆ. ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (SIT) ಕಂಡರೆ ನಿಮಗ್ಯಾಕೆ ಈ ಮಟ್ಟದ ನಡುಕ? ನಿಮ್ಮ ಕಾಂಗ್ರೆಸ್ ಸರ್ಕಾರದ ಸಚಿವರು ಶಾಸಕರು, ನಾಯಕರು ತಪ್ಪು ಮಾಡಿಲ್ಲ ಎಂದಾದರೆ ಈ ಭೀತಿ ಯಾಕೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರದ ನಡೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದನ್ನು ಟೀಕಿಸಿರುವ ಅವರು, "ಯಾರನ್ನು ರಕ್ಷಿಸಲು ಈ ಮೇಲ್ಮನವಿ?" ಎಂದು ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಸೆಪ್ಟೆಂಬರ್ 21ರಂದು ಕೆಪಿಎಸ್‌ಸಿ ನೇಮಕಾತಿಯಲ್ಲಿನ ಆರೋಪಿತ ಅಕ್ರಮಗಳ ಕುರಿತು ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐದು ಮಂದಿ ಅಧಿಕಾರಿಗಳ ಎಸ್‌ಐಟಿ ರಚಿಸಿತ್ತು.
ಈಗಾಗಲೇ ಸಿಐಡಿ ನಡೆಸುತ್ತಿರುವ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸೂಚಿಸಿದ್ದು, 100 ದಿನಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.
ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಹೈಕೋರ್ಟ್ ತನಿಖಾ ತಂಡವನ್ನು ರಚಿಸಬಹುದಾದರೂ, ತಂಡದ ಮುಖ್ಯಸ್ಥರಾಗಿ ನಿರ್ದಿಷ್ಟ ಅಧಿಕಾರಿಯನ್ನು ನೇಮಿಸುವುದು ಕಾರ್ಯಾಂಗದ ವ್ಯಾಪ್ತಿಗೆ ಸೇರಿದೆ ಎಂಬುದು ಸರ್ಕಾರದ ವಾದವಾಗಿದೆ.
ಈ ಬೆಳವಣಿಗೆಯನ್ನು ಉಲ್ಲೇಖಿಸಿ ಆರ್. ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೈಕೋರ್ಟ್ ನೇಮಿಸಿರುವ ಎಸ್‌ಐಟಿ ತನಿಖೆಗೆ ಸರ್ಕಾರ ಏಕೆ ಭಯಪಡುತ್ತಿದೆ ಎಂದು ಪ್ರಶ್ನಿಸಿರುವ ಅವರು, ಸರ್ಕಾರದ ಸಚಿವರು, ಶಾಸಕರು ಅಥವಾ ನಾಯಕರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಸ್ವತಂತ್ರ ತನಿಖೆಯನ್ನು ಎದುರಿಸಲು ಹಿಂಜರಿಕೆ ಏಕೆ ಎಂದು ಕೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆದರೆ ಕಾಂಗ್ರೆಸ್ ಸರ್ಕಾರದ ಪ್ರಭಾವಿ ನಾಯಕರ, ಮಂತ್ರಿಗಳ ಮತ್ತು ಕೆಪಿಎಸ್‌ಸಿ ದಲ್ಲಾಳಿಗಳ ಹೆಸರುಗಳು ಹೊರಬರುತ್ತವೆ ಎಂಬ ಭಯ ಕಾಡುತ್ತಿದೆಯೇ? ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯವನ್ನು ಬಲಿಕೊಟ್ಟ ಮಹಾ ಪಾಪಿಗಳನ್ನು ರಕ್ಷಿಸಲು ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಉದ್ಯೋಗಾಕಾಂಕ್ಷಿ ಯುವಕರ ಕನಸುಗಳನ್ನು ಹರಾಜು ಹಾಕಿ, ಕಮಿಷನ್ ದಂಧೆಯಲ್ಲಿ ಮಾರಿ, ಕೆಪಿಎಸ್‌ಸಿಯನ್ನು ಭ್ರಷ್ಟಾಚಾರದ ಅಡ್ಡಾವನ್ನಾಗಿ ಮಾಡಿರುವ ನಿಮ್ಮ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮಾಡಿದ ಪಾಪ ಸಾಲದು ಅಂತ ಈಗ ಸತ್ಯವನ್ನು ಮುಚ್ಚಿಹಾಕಿ, ಭ್ರಷ್ಟರನ್ನು ರಕ್ಷಿಸಲು ಕೋಟಿ ಕೋಟಿ ಸರ್ಕಾರಿ ಹಣ ಪೋಲು ಮಾಡಿ ಸುಪ್ರೀಂ ಕೋರ್ಟ್‌ಗೆ ವಕೀಲರನ್ನು ನೇಮಿಸುತ್ತಿದ್ದೀರಿ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಈ ಕಳ್ಳಾಟಗಳು ಇನ್ಮುಂದೆ ನಡೆಯುವುದಿಲ್ಲ. ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಯುವ ಎಸ್‌ಐಟಿ ತನಿಖೆಗೆ ಹೆದರಿ ಓಡಿಹೋಗುವುದನ್ನು ಬಿಟ್ಟು, ತನಿಖೆಗೆ ಸಹಕರಿಸಿ. ಯುವಕರ ಭವಿಷ್ಯದ ಜೊತೆ ಆಟವಾಡಿದ ಪ್ರತಿಯೊಬ್ಬ ಭ್ರಷ್ಟನೂ ಕಂಬಿ ಎಣಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.