ಸಂಗ್ರಹ ಚಿತ್ರ 
ವಿಶೇಷ ಲೇಖನಗಳು

ಕನ್ನಡಿಗರ ಪಾಲಿಗೆ ಶಾಪವಾಗಿ ಪರಿಣಮಿಸಿದ ಗಡಿ ವಿವಾದಗಳು!

ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ದಶಕಗಳಿಂದಲೂ ಗಡಿ ವಿವಾದ ಹಾಗೆಯೇ ಇದೆ. ವಿವಾದವನ್ನು ಪರಿಹರಿಸುವ ಕುರಿತು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ...

ಕರ್ನಾಟಕಕ್ಕೆ ಸಂಬಂಧಿಸಿದಂತೆ ಗಡಿವಿವಾದಗಳು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಗಡಿ ವಿವಾದಗಳು ಪೀಡಿಸುತ್ತಲೇ ಬಂದಿವೆ. ಮಹಾರಾಷ್ಟ್ರ,  ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ದಶಕಗಳಿಂದಲೂ ಗಡಿ ವಿವಾದ ಹಾಗೆಯೇ ಇದೆ. ವಿವಾದವನ್ನು ಪರಿಹರಿಸುವ ಕುರಿತು ಯಾವುದೇ ರಾಜಕೀಯ ಪಕ್ಷಗಳು ತಮ್ಮ  ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಹೀಗಾಗಿಯೇ ಕರ್ನಾಟಕ ಏಕೀಕರಣವಾಗಿ 60 ವರ್ಷಗಳೇ ಕಳೆದರೂ ಈ ವರೆಗೂ ಅಕ್ಕಪಕ್ಕದ ರಾಜ್ಯಗಳೊಂದಿಗಿನ ಗಡಿ ವಿವಾದವನ್ನು  ಬಗೆಹರಿಸಿಕೊಳ್ಳಲಾಗಿಲ್ಲ.

ಗಡಿವಿವಾದಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ಸ್ಪರ್ಧೆ ಇರುವುದು ನೆರೆ ಮಹಾರಾಷ್ಟ್ರ ರಾಜ್ಯದೊಂದಿಗೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ವರದಿ ಘೋಷಿಸಿ ದಶಕಗಳೇ  ಕಳೆದರೂ ಮಹಾರಾಷ್ಟ್ರ ಸರ್ಕಾರ ಮಾತ್ರ ವರದಿಯನ್ನು ಒಪ್ಪಿಕೊಳ್ಳಲು ಸುತಾರಾಂ ಸಿದ್ಧವಿಲ್ಲ. ಮತ್ತೊಂದು ಪ್ರಮುಖ ಅಂಶವೆಂದರೆ ಗಡಿ ವಿವಾದ ಪರಿಷ್ಕರಣೆಗೆ ಮಹಾಜನ್  ಆಯೋಗ ರಚಿಸಲೇ  ಬೇಕು ಎಂದು ಮೊದಲು ಪಟ್ಟುಹಿಡಿದಿದ್ದೇ ಮಹಾರಾಷ್ಟ್ರ. ಕರ್ನಾಟಕ ಸರ್ಕಾರ ಬಲವಂತಕ್ಕೆ ಕಟ್ಟುಬಿದ್ದು ಆಯೋಗ ರಚನೆಗೆ ಒಪ್ಪಿಗೆ ನೀಡಿತ್ತು. ಆದರೆ ಮಹಾಜನ್ ಆಯೋಗದ ವರದಿ  ಬಹಿರಂಗಗೊಳ್ಳುತ್ತಿದ್ದಂತೆ ಮಹಾರಾಷ್ಟ್ರದವರು ವರದಿಯನ್ನು ಒಪ್ಪುವುದಿಲ್ಲವೆಂದು ತಗಾದೆ ತೆಗೆದರು.

ಆಗಸ್ಟ್ 1967ರಲ್ಲಿ ನ್ಯಾಯಮೂರ್ತಿ ಮಹಾಜನ್ 196 ಪುಟಗಳ ವರದಿ ಸಲ್ಲಿಸಿದ್ದರು. ಮಹಾರಾಷ್ಟ್ರ, ಬೆಳಗಾವಿ ಸೇರಿ 814 ಹಳ್ಳಿಗಳನ್ನು ಕೇಳಿತ್ತು. ಆದರೆ 264 ಹಳ್ಳಿಗಳನ್ನು 6563 ಚದರ ಮೈಲು  ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಇದಕ್ಕೊಪ್ಪದ ಮಹಾರಾಷ್ಟ್ರ ರಾಜಕಾರಣಿಗಳು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಬಳಿಕ ಈಗ ನ್ಯಾಯಾಲಯದ ಮೊರೆಹೋಗಿದೆ.  ಈ ಎರಡು ರಾಜ್ಯಗಳ ಗಡಿವಿವಾದಕ್ಕೆ 50 ವರ್ಷಗಳ ಇತಿಹಾಸವಿದೆ 1961ರಿಂದ ಎಂ.ಇ.ಎಸ್. ನಾಯಕತ್ವ ವಹಿಸಿದೆ. 1957ರಲ್ಲಿಯೇ ಮುಂಬೈ ಸರ್ಕಾರದ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿ  ಬೆಳಗಾವಿ ಕಾರವಾರ ನಿಪ್ಪಾಣಿ ಒಳಗೊಂಡು 814 ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನ ಮಾಡಬೇಕೆಂದು ಒತ್ತಡ ಹಾಕಿದ್ದರು. ಮಹಾರಾಷ್ಟ್ರ ಸರಕಾರ ಮಹಾಜನ್ ವರದಿಯನ್ನು ತಿರಸ್ಕರಿಸುವ  ನಿರ್ಣಯ ಅಂಗೀಕರಿಸಿತು. ಕರ್ನಾಟಕ ಸರಕಾರ ಮಹಾಜನ್ ವರದಿ ಅಂತಿಮ ಎನ್ನುವ ನಿರ್ಣಯ ಅಂಗೀಕರಿಸಿವೆ.

ರಾಜಕೀಯ ಷಡ್ಯಂತ್ರಗಳು ಫಲಿಸದಿದ್ದಾಗ ಮಹಾರಾಷ್ಟ್ರ ಕೇಂದ್ರ ಸರಕಾರವನ್ನು ಮೊದಲ ಮತ್ತು ಕರ್ನಾಟಕವನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡಿ ಸುಪ್ರೀಂ ಕೋರ್ಟ್‌ನಲ್ಲಿ ದೂರು  ದಾಖಲಿಸಿದ್ದು, ಮಹಾರಾಷ್ಟ್ರದ ದೂರಿಗೆ ಕರ್ನಾಟಕ ಕೂಡ 2011ರ ಸೆಪ್ಟೆಂಬರ್ ನಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ ಮಾಡಿತ್ತು. 27-4-2006ರಲ್ಲಿ ಮಹಾರಾಷ್ಟ್ರದಿಂದ ಗಡಿಯಲ್ಲಿ ಕೇಂದ್ರಾಡಳಿತ ಜಾರಿಗೆ  ಆಗ್ರಹಿಸುವ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲು 16-11-2006ರಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗಿತ್ತು. 13-02-2009ರಂದು ಮಹಾರಾಷ್ಟ್ರದಿಂದ  ಎರಡನೇ ತಿದ್ದುಪಡಿ ಅರ್ಜಿ ಸಲ್ಲಿಕೆಯಾಯಿತು. ಅದಕ್ಕೆ ಕೇಂದ್ರ ಸರಕಾರ ತನ್ನ ನಿಲುವಿನ ಪ್ರಮಾಣ ಪತ್ರ ಸಲ್ಲಿಸಿದೆ. ದಾವೆ ವಿಚಾರಣೆ ವಿಳಂಬಕ್ಕೆ ಮಹಾರಾಷ್ಟ್ರ ಕಾರಣ. ಜುಲೈ 8, 2010  ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಪ್ರಮಾಣ ಪತ್ರ ಸಲ್ಲಿಸಿತು. ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಬೇಕಿದೆ.

ಇನ್ನು ವಿವಾದಿತ ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಮ್ಮ ಅಸ್ಥಿತ್ವಕ್ಕಾಗಿ ಮತ್ತು ರಾಜಕೀಯ ಉಳಿವಿಗಾಗಿ ಹವಣಿಸುತ್ತಿರುವ ಎಂಇಎಸ್ ನಂತಹ ಕೆಲ ರಾಜಕೀಯ ಪಕ್ಷಗಳ ಪುಡಾರಿ ನಾಯಕರು  ನಿರಂತರ ಕಿತಾಪತಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಬೆಳಗಾವಿಯ ಕನ್ನಡಿಗರು-ಮರಾಠಿಗರ ನಡುವೆ ಆಗಾಗ್ಗೆ ಕದನಗಳು ಏರ್ಪಡುತ್ತಿರುತ್ತವೆ. ಬೆಳಗಾವಿಯಲ್ಲಿರುವ ಕನ್ನಡಿಗರು ನೆಮ್ಮದಿಯಾಗಿ  ಬದುಕದಂತೆ ಎಂಇಎಸ್ ಪುಂಡರು ಸದಾ ಒಂದಿಲ್ಲೊಂದು ವಿಷಯಕ್ಕೆ ಗೊಂದಲ, ಗಲಭೆ ಎಬ್ಬಿಸುತ್ತಲೇ ಬಂದಿದ್ದಾರೆ. ಪ್ರಮುಖವಾಗಿ ಕನ್ನಡರಾಜ್ಯೋತ್ಸವ ದಿನಾಚರಣೆಯಂದು ಬೆಳಗಾವಿಯಲ್ಲಿ  ಕರಾಳ ದಿನಾಚರಣೆ ಮತ್ತು ಬೆಳಗಾವಿ ಅಧಿವೇಶನದ ವೇಳೆ ಮಹಾ ಮೇಳಾವ್ ಮಾಡುವ ಮೂಲಕ ಕನ್ನಡಿಗರ ಶಾಂತಿಯನ್ನು ಕೆದಕುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.

ಕನ್ನಡಪರ ಸಂಘಟನೆಗಳ ಪಾದಾರ್ಪಣೆಯೊಂದಿಗೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಕೊಂಚ ಕಡಿಮೆಯಾಗಿದೆಯಾದರೂ ಆಗ್ಗಾಗ್ಗೆ ಅವರ ಮಾಯದ ಗಾಯದಂತೆ ಪದೇ ಪದೇ ಗಲಭೆಗಳು  ಮರುಕಳಿಸುತ್ತಿವೆ. ಇನ್ನು ಮಹಾಜನ್ ಆಯೋಗದ ಪ್ರಕಾರ ಕರ್ನಾಟಕ ಕೇರಳ ರಾಜ್ಯದೊಂದಿಗೂ ಗಡಿವಿವಾದದಲ್ಲಿ ತೊಡಗಿದ್ದು, ಪ್ರಸ್ತುತ ಕೇರಳಕ್ಕೆ ಸೇರಿರುವ ಕಾಸರಗೋಡು ಆಯೋಗದ  ವರದಿಯಂತೆ ಕರ್ನಾಟಕಕ್ಕೆ ಸೇರಬೇಕಿದೆ. ಆದರೆ ಮಹಾಜನ್ ವರದಿ ಜಾರಿಯಾಗದ ಹಿನ್ನಲೆಯಲ್ಲಿ ಕಾಸರಗೋಡು ಕೇರಳದಲ್ಲಿಯೇ ಉಳಿದುಕೊಂಡಿದೆ. ಇದಿಷ್ಟೇ ಅಲ್ಲ, ಕರ್ನಾಟಕಕ್ಕೇ  ಸೇರಬೇಕಾದ ಹಲವಾರು ಪ್ರದೇಶಗಳು ಇತರೆ ರಾಜ್ಯಗಳಲ್ಲೇ ಉಳಿದು ಹೋಗಿವೆ. ಆ ಪ್ರದೇಶಗಳ ಜನರು ನಮ್ಮನ್ನೂ ಕರ್ನಾಟಕಕ್ಕೇ ಸೇರಿಸಿ ಎಂದು ಬೇಡಿಕೊಂಡರೂ ಯಾವುದೇ  ಪ್ರಯೋಜನವಾಗುತ್ತಿಲ್ಲ.

ಪೋರ್ಚುಗೀಸರ ಕೈಯಿಂದ ವಾಪಸ್ಸು ಪಡೆದ ನಂತರ ಗೋವಾ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸಬೇಕಾಗಿತ್ತು. ಗೋವಾ ರಚನೆಯಾದಾಗ ಭಾಷಾವಾರು ಅಂಶವನ್ನು ಪರಿಗಣಿಸಲಿಲ್ಲ ಎಂಬ ವಾದ ಬಲವಾಗಿ ಕೇಳಿಬರುತ್ತಿದ್ದು, ಈಗ ಗೋವಾ, ಕರ್ನಾಟಕದಲ್ಲಿರುವ ಕೊಂಕಣಿ ಭಾಷಿಕರಿರುವ ಕಾರವಾರ ಜೊಮಿಡಾ, ಹಳಿಯಾಳ, ಬೆಳಗಾವಿ ಪ್ರದೇಶವನ್ನು ತನಗೆ ಬಿಟ್ಟುಕೊಡಬೇಕೆಂದು ಹೇಳುತ್ತಿದೆ.

ಇನ್ನು ಕರ್ನಾಟಕದ ಭಾಗವೇ ಆಗಿರುವ ಹೊಗೇನಕಲ್ ನಲ್ಲಿ ಅಕ್ರಮವಾಗಿ ಪ್ರವೇಶಿರುವ ತಮಿಳುನಾಡು ಅಲ್ಲಿ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಹೊಗೇನಕಲ್ ತನ್ನದೇ ಎಂಬ  ಮೊಂಡುವಾದವನ್ನು ಮಂಡಿಸಹೊರಟಿದೆ. ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಕರ್ನಾಟಕದ ರಾಜಕಾರಣಿಗಳು ಪ್ರತಿಭಟನೆಗೆ ಮುಂದಾಗದೇ ಇರುವುದು ಅವರ ಇಚ್ಛಾಶಕ್ತಿಯ ಕೊರತೆಗೆ ಹಿಡಿದ  ಕೈಗನ್ನಡಿಯಾಗಿದೆ. ಇನ್ನು ಇದಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಕನ್ನಡ ಪರ ಸಂಘಟನೆಗಳು ಜಂಟಿ ಸಮೀಕ್ಷೆ ನಡೆಸಿದ ನಂತರವೇ ಯೋಜನೆ ಜಾರಿ ಮಾಡಿ ಎಂದು  ಆಗ್ರಹಿಸಿ ಈ ವರೆಗೂ ನೂರಾರು ಪ್ರತಿಭಟನೆಗಳನ್ನು ನಡೆಸಿದೆ. ಆದರೆ ಇದಾವುದಕ್ಕೂ ಸೊಪ್ಪು ಹಾಕದ ತಮಿಳುನಾಡು ಸರ್ಕಾರ ತನ್ನ ಯೋಜನೆಯನ್ನು ಮುಂದುವರೆಸಿದೆ.

ಒಟ್ಟಾರೆ ನಮ್ಮ ಭೂಮಿಯನ್ನು ನಾವು ವಾಪಸ್ ಪಡೆಯಲು ನೆರೆಯ ರಾಜ್ಯಗಳ ಅಪ್ಪಣೆಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದು ಕನ್ನಡಗಿರ ಪಾಲಿನ ಶಾಪವಲ್ಲದೇ ಮತ್ತೇನು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇದೆಲ್ಲಾ ಒಂದೆರಡು ತಿಂಗಳಷ್ಟೆ, ಭಾರತ ಮತ್ತೆ ಮಾತುಕತೆಗೆ ಬರಲಿದೆ, ಕ್ಷಮೆಯಾಚಿಸುತ್ತದೆ: ಅಮೆರಿಕ ವಾಣಿಜ್ಯ ಸಚಿವ ಲುಟ್ನಿಕ್

'ಇಸ್ಲಾಂಗೆ ವಿರುದ್ಧ': ದರ್ಗಾದ ಫಲಕದಲ್ಲಿನ ಅಶೋಕ ಲಾಂಛನ ವಿರೂಪಗೊಳಿಸಿದ ಸ್ಥಳೀಯರು!: Video

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ: ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!

GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಏಕಿಲ್ಲ?: GST 3.0 ಬಗ್ಗೆ Nirmala Sitharaman ಹೇಳಿದ್ದೇನು?

"GST ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಸಲು ಬದ್ಧ": TATA ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ: ವಿವರ ಇಂತಿದೆ..

SCROLL FOR NEXT