ರೀ .. ಬೆಳಿಗ್ಗೆ ೮ ಗಂಟೆ ಆಗಿದೆ , ಸ್ವಲ್ಪ ಎದ್ದು ಹೊರಗೆ ಜಾಗ್,ರನ್ ಮಾಡಿ ಬರಬಾರ್ದಾ ? ಅಂತಾ ಮಡದಿ ಗೊಣಗಿದಾಗ ...ಇನ್ನು ಒಂದು ಹತ್ತೇ ಹತ್ತು ನಿಮಿಷ ಅಂತಾ ಅಂದದ್ದಕ್ಕೆ , ಇಲ್ಲಿ ಬೇಸಿಗೆ ಕಾಲ ಇರೋದೇ ೩ ತಿಂಗಳು ...ಸ್ವಲ್ಪನಾದ್ರೂ ಉಪಯೋಗ ಮಾಡ್ಕೊಬೇಕಲ್ವಾ ಅಂತಾ ಅಂದ ಅವಳ ಉಪದೇಶ ಕೇಳಿ, ಸರಿ ಅಂತ ಶೂ ಹಾಕೊಂಡು ಮನೆ ಹತ್ತಿರಾನೆ ಇದ್ದ ಪಾರ್ಕ್ನಲ್ಲಿ ಜಾಗ್ ಮಾಡ್ತಾ ಇದ್ದೆ .
ಆಗ ತಾನೇ ಮುಚ್ಚಿದ ಮೋಡಗಳ ಮಧ್ಯೆ ಇಣುಕು ನೋಡುತ್ತಿದ್ದ ಸೂರ್ಯನ ಕಿರಣಗಳು , ರಾತ್ರಿ ಸುರಿದು ಹೋಗಿದ್ದ ಮಳೆಗೆ ನೆನೆದ ಮಣ್ಣಿನ ವಾಸನೆ , ನಿನಗಿಂತ ನಾವೇ ಮೊದಲಿಗೆ ಎದ್ದಿದ್ದು ಅಂತಾ ನನ್ನನ್ನೇ ನೋಡುತ್ತ ಆಹಾರ ಹುಡುಕುತ್ತಿದ್ದ ಹಕ್ಕಿಗಳ ಚಿಲಿಪಿಲಿ, ಎಲ್ಲೆಡೆ ಕಂಗೊಳಿಸುತ್ತಿರುವ ಹಸಿರಿನ ಸಿರಿ...ಹಾ! ಹಾ! ಒಳ್ಳೆ ಆಹ್ಲಾದಕರ ವಾತಾವರಣ ಅಂತಾ ಇನ್ನೂ ಹುಮ್ಮಸ್ಸಿನಿಂದ ಜಾಗ್ ಮಾಡುತ್ತಾ ಎದುರು ಬಂದವರಿಗೆ ಮುಗುಳ್ನಗೆಯಲ್ಲೇ ಹಾಯ್ ಎಂದು ಹೇಳಿದ್ದೆ !
ಇದ್ದಕ್ಕಿದ್ದಂತೆ ಹಿಂಬದಿಯಿಂದ ಜೋರಾಗಿ ಬೌ ! ಬೌ ! ಅಂತಾ ಸದ್ದು ಕೇಳಿ ಬಂದಾಗ ಒಂದು ನಿಮಿಷ ಮೈ ಜುಮ್ಮೆಂದಿತ್ತು ! ತಿರುಗಿ ನೋಡಿದರೆ ಒಳ್ಳೆ ಮಸ್ತಾಗಿ ಬೆಳೆದಿದ್ದ, ದೊಡ್ಡದಾಗಿ ಬಾಯಿ ತೆರೆದು ನನ್ನನ್ನೇ ನೋಡುತ್ತಿದ್ದ ಡಾಬರ್ಮನ್ ನಾಯಿ ! ಅದರ ಹಲ್ಲುಗಳನ್ನು ನೋಡಿ ಒಂದು ಕ್ಷಣ ಕಾಲಲ್ಲಿ ಶಕ್ತಿಯೇ ಇಲ್ಲದಂತಾಗಿ ಓಡದೆ ಅಲ್ಲೇ ನಿಂತಿದ್ದೆ ! ಹಾಗೆ ಮನದಲ್ಲಿ ನಮ್ಮ ಬೆಂಗಳೂರಿನ ಬೀದಿ ನಾಯಿಗಳ ಹಾವಳಿಯ ಚಿತ್ರಣ ಪಟಪಟ ಅಂತಾ ಬಂದು ಹೋಗಿತ್ತು .... ):
ಹೇಯ್ ಸ್ಟಾಪ್ ಇಟ್ , ಸ್ಟಾಪ್ ಇಟ್ ಕೆಂಪಾ ! ಅಂತಾ ಯಾರೋ ಜೋರಾಗಿ ಕೂಗಿ ಅದಕ್ಕೆ ಕಟ್ಟಿದ್ದ ಬೆಲ್ಟಿನ ಪಟ್ಟಿಯನ್ನು ಎಳೆದಾಗ ಅದು ಸುಮ್ಮನೆ ಸಾಧು ಪ್ರಾಣಿಯ ಹಾಗೆ ನಿಂತಿತ್ತು ! ಅಲ್ಲಿಯವರೆಗೂ ಜೋರಾಗಿ ಬಡಿದುಕೊಳ್ಳುತ್ತಿದ್ದ ಹೃದಯವನ್ನು (ಗೊತ್ತಿಲ್ಲ , ಅದು ಜೋರಾಗಿ ಜಾಗ್ ಮಾಡ್ತಾ ಓಡಿದ್ದಕ್ಕೋ ಅಥವಾ ಈ ಪಾಟಿ ದೊಡ್ಡದಾಗಿ ಬಾಯಿ ತೆಗೆದುಕೊಂಡು ನಿಂತಿರೋ ಈ ನಾಯಿಗೋ) ಕೈಯಲ್ಲಿ ಹಿಡಿದಿದ್ದ ನನಗೆ ಆ ನಾಯಿ ಬಿಟ್ಟರೆ ಬೇರೆ ಯಾರು ಕಣ್ಣಿಗೆ ಕಂಡಿದ್ದಿಲ್ಲ.
ಡೋಂಟ್ ವರಿ , ಹಿ ಇಸ್ ವೆರಿ ಫ್ರೆಂಡ್ಲಿ ಅಂತಾ ಆ ಅಮೆರಿಕನ್ ಲೇಡಿ ಹೇಳಿದ ಮೇಲೆ ಸ್ವಲ್ಪ ಜೀವ ಬಂದಿತ್ತು ! ಆಗ ಏನೋ ನೆನಪಾದಂತಾಗಿ, ಅದರ ಹೆಸರೇನು ? ಅಂತಾ ಕೇಳಿದ್ದೆ. ಹಿಸ್ ನೇಮ್ "ಕೆಂಪಾ" ,ಅಂತಾ ಆ ಯಮ್ಮ ಅಮೆರಿಕನ್ ಇಂಗ್ಲೀಷಿನಲ್ಲಿ ಇಂಪಾಗಿ ಹೇಳಿದಾಗ ...ಇದು ನಮ್ಮ ಕನ್ನಡದ ಹೆಸರು ಇದ್ದ ಹಾಗಿದೆಯಲ್ಲ ಅಂತಾ ಜೋರಾಗೇ ಗುನುಗಿದ್ದೆ ! "ಓಹ್ ಯಾ ! ಕೆಂಪ ಇಸ್ ಇಂಡಿಯನ್ ನೇಮ್ ಓನ್ಲಿ ...ನನ್ನ ಹಸ್ಬೆಂಡ್ ಕನ್ನಡಿಗ , ನನಗೂ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ" ಆ ಲೇಡಿ ನಿಧಾನವಾಗಿ ಹೇಳಿದಾಗ ನಂಗೆ ಒಂದು ರೀತಿ ಆಶ್ಚರ್ಯ ಆದರೆ ಅದಕ್ಕಿಂತಾ ಹೆಚ್ಚಾಗಿ ಸಂತೋಷವಾಗಿತ್ತು. Even though ಮೈ ಹಸ್ಬೆಂಡ್ born here , he still ಲವ್ಸ್ ಕನ್ನಡ , ನಂಗು ಕನ್ನಡ ಇಷ್ಟ. ಸಿನ್ಸ್ ದಿ ಡಾಗ್ ಇಸ್ ರೆಡ್ ಕಲರ್ , we named him as "ಕೆಂಪ" ಅಂತಾ ಆ ಅಮೆರಿಕನ್ ಲೇಡಿ ವಿವರಣೆ ಕೊಟ್ಟಾಗ ಅವರ ಕನ್ನಡಾಭಿಮಾನಕ್ಕೆ ಮೆಚ್ಚಿ ತಲೆದೂಗಿದಾಗ ....ಹಾಗೇ ನನ್ನ ಮನ ನಮ್ಮ ಊರಿಗೆ ಓಡಿತ್ತು !
ಹೋದ ಬಾರಿ ನಮ್ಮ ಊರಿಗೆ ಹೋಗಿದ್ದಾಗ , ಕೆಲಸ ಇಲ್ಲದಲೇ ಮನೆಯಲ್ಲಿ ಸುಮ್ಮನೆ ಕೂತಿದ್ದ ನಂಗೆ ...ಅಪ್ಪ " ಲೇ ನಿನ್ನ ಫ್ರೆಂಡ್ ಗೌಡ್ರು ಮಗ ಜಗ್ಗಿ (ಜಗದೀಶ) , ನಿನ್ನ ಕೇಳ್ತಿದ್ದ ..ಹೋಗಿ ಬರೋಗು ಅವರ ಮನೆಗೆ" ಅಂದಾಗ ಎದ್ದು ಹೊರಟಿದ್ದೆ. ಗೌಡ್ರು ಮನೆಯ ಆ ದೊಡ್ಡ ಗೇಟನ್ನು ತೆಗೆದಾಗ ಅದು ಕಿರ್ರೋ ಅಂತಾ ಶಬ್ದ ಮಾಡಿದ್ದಕ್ಕೆ ಬೌ ಬೌ ಅಂತಾ ಎಲ್ಲಿಂದಲೋ ಏನೋ ಸರ್ರಂತ ದೊಡ್ಡ ನಾಯಿ ಬಂದಿತ್ತು. ಹೇಯ್ ಸ್ಟೀವಿ , ಸ್ಟಾಪ್ ಇಟ್ ಅಂತಾ ಒಳಗಿಂದಲೇ ಗದರಿಸುತ್ತಾ ಜಗ್ಗಿ ಹೊರ ಬಂದಿದ್ದ. ಹಲೋ ಏನು ಗುರು ಸಮಾಚಾರ , ಅಮೇರಿಕಾದಿಂದ ಯಾವಾಗ ಬಂದೆ ? ಅಂತಾ ಅಲ್ಲೇ ಕುಶಲ ವಿಚಾರಿಸಿದ ಅವನಿಗೆ , ಮೊನ್ನೆ ಬಂದೆ ಕಣೋ ...ಅಲ್ಲೋ ಲಾಸ್ಟ್ ಟೈಮ್ ೨ ವರ್ಷದ ಕೆಳಗೆ ಬಂದಾಗ ಇದೇ ನಾಯಿಗೆ "ರಾಮು , ರಾಮು " ಅಂತಾ ಇದ್ದೆಯಲ್ವಾ ? ಅಂತ ನಾ ಕೇಳಿದಾಗ .. "ನಿಜ ಗುರು ..ಆದ್ರೆ ಈಗ ಹೆಂಡ್ತಿ ಬಂದಿದಾಳೆ...ಅವಳೇ "ರಾಮು" ನಾ "ಸ್ಟೀವಿ" ಮಾಡಿದಾಳೆ ....ಆವಾ ನಿಟ್ಟುಸಿರು ಬಿಟ್ಟು ಹೇಳಿದ್ದ !
ಓ ಹೌದೇನೋ ? ಮದುವೆ ಆಗಿದ್ದೇ ಹೇಳಲಿಲ್ಲ ..ಸರಿ ಬಿಡು ಕಂಗ್ರಾಟ್ಸ್ ಜಗ್ಗಿ ..ಅಂತಾ ಹೇಳಿ ಅವನ ಜೊತೆ ಹಾಗೇ ಒಳಗಡೆ ಹೆಜ್ಜೆ ಇರಿಸಿದ್ದೆ. ದೊಡ್ಡ ಗೌಡರಿಗೆ ನಮಸ್ಕಾರ ಮಾಡಿದ ಮೇಲೆ ಜಗ್ಗಿ ..ನನ್ನ ಹೆಂಡ್ತಿ ಇವಳು ಅಂತಾ ಪರಿಚಯಿಸಿದ್ದ. "ಹಾಯ್ - ಹೌ ಆರ್ ಯು ?" ಅಂತಾ ಆ ಕಡೆಯಿಂದ ಕೇಳಿಬಂದಾಗ , ನಾನು ಆರಾಮಿದಿನ್ರಿ , ನೀವು ? ಅಂತಾ ಕೇಳಿದ್ದೆ. ಆಮೇಲೆ ಕಾಫಿ ಹೀರುತ್ತಾ ಹೊರಗಡೆ ಜಗ್ಗಿ ಜೊತೆ ಕೂತಿದ್ದಾಗ ಕುತೂಹಲದಿಂದ ಕೇಳಿದ್ದೆ ಅವನಿಗೆ "ಜಗ್ಗಿ ನಿನ್ನ ವೈಫ್ ಕನ್ನಡದೊರಾ ? ಅಥ್ವಾ ಬೆಂಗಳೂರಿನವರೋ ಅಥ್ವಾ ಸಾಫ್ಟ್ ವೇರ್ ಇಂಜಿನಿಯರ್ hmm ?". ಲೇ ಅಂಥದೇನು ಇಲ್ಲ ನೋಡಪ್ಪ ..ಅವಳು ನಮ್ಮ ಪಕ್ಕದ ಹಳ್ಳಿಯ ಗೀತ ಕಣೋ .... PUC ಗೆ ಸಲಾಂ ಹೊಡೆದು ಈಗ ಮನೆ ಒಡತಿ ನೋಡಪ್ಪ ...ಅವಳಿಗೆ ಯಾಕೋ ವೆಸ್ಟೆರ್ನ್ ಹುಚ್ಚು , ಅದಕ್ಕೆ ನಾಯಿಗೂ ಹೆಸರು ಚೇಂಜ್ , ಮಾತಾಡೋ ಸ್ಟೈಲು ಸ್ವಲ್ಪ ಹಂಗೆ ..hmmm ಹೌದಾ ? ಇರ್ಲಿ ಬಿಡಪ್ಪ ಅಂತಾ ಹೇಳಿ ಅಲ್ಲಿಂದ ಹೊರಟಿದ್ದೆ !
ಬೌ ಬೌ ...ಕೆಂಪನ ಶಬ್ದ ಕೇಳಿ ಗೌಡ್ರ ಮನೆಯಿಂದ ಮತ್ತೆ ನನ್ನ ಜಾಗ್ ಟ್ರಾಕಿಗೆ ಬಂದಿದ್ದೆ ..."ನೈಸ್ ಟಾಕಿಂಗ್ ಟು ಯು ...ತುಂಬಾ ಧನ್ಯವಾದಗಳು " ಅಂತಾ ಆ ಅಮೆರಿಕನ್ ಲೇಡಿ ಕನ್ನಡದಲ್ಲಿ ಹೇಳಿ ಹೋದಾಗ ...ಮನದಲ್ಲಿ ಏನೋ ಒಂತರ ಸಂತೋಷದ ಜೊತೆ ಬೇಜಾರು ಆಗಿತ್ತು.
ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಅವರು ಕನ್ನಡವನ್ನು ಪ್ರೀತಿಸಿ ತಮ್ಮ ಮುದ್ದಾದ ನಾಯಿಗೆ ಕನ್ನಡದ ಹೆಸರನ್ನೇ ಇಟ್ಟು "ಕೆಂಪ ಅಂತ ಇಂಪಾಗಿ" ಕರೆದರೆ , ನಮ್ಮ ನಾಡಲ್ಲೇ ಹುಟ್ಟಿ ಬೆಳೆದ ನಾವು ಇಂಗ್ಲಿಷ್ ವ್ಯಾಮೋಹಕ್ಕೆ ಮರುಳಾಗಿ "ರಾಮು ನ ಸ್ಟೀವಿ" ಮಾಡಿದ್ದನ್ನು ನೋಡಿದರೆ ಒಂದು ದಿನ "ಈಸ್ಟ್ - ವೆಸ್ಟ್" ಅದಲು ಬದಲಾಗಬಹುದೇ ? ಅಂತ ಅನುಮಾನ ಕಾಡಿತ್ತು.
ಅಯ್ಯೋ ಟೈಮ್ ಆಗಿ ಹೋಯ್ತು , ಇನ್ನೂ ಲೇಟ್ ಮಾಡಿದ್ರೆ ಮನೆಯವರು ಸಿಟ್ಟಾಗಿ "ಕೆಂಪಾ" ದರೆ ಮತ್ತೆ "ತಂಪು" ಮಾಡೋದು ಕಷ್ಟ ಅಂತಾ ಜೋರಾಗಿ ಓಡಿದ್ದೆ ಮನೆಯಡೆ !
ಕೆಂಪಾ ...ಅಂತಾ ಕನ್ನಡದ ಹೆಸರ
ಕೇಳಲು , ಕಿವಿಗೆ ಎಷ್ಟು ಇಂಪು !
ನಮ್ಮ ಹಳ್ಳಿಯ ಗೀತಮ್ಮ ...ಅದಕ್ಕೆ ಸ್ಟೀವಿ
ಕಂಡಿತ್ತು ..ಹೆಚ್ಚಾಗಿ ಇಂಗ್ಲಿಷ್ ಮಂಪು !