ಸಾಂದರ್ಭಿಕ ಚಿತ್ರ 
ಸಂಚಯ

ನನ್ಹೆಂಡ್ತಿ ನನಗೆ ರೆಸ್ಪೆಕ್ಟೇ ಕೊಡೋದಿಲ್ಲ, ಫುಲ್ ಅನ್'ರೆಸ್ಪೆಕ್ಟು: ಗಂಡಂದಿರ ಹಳಹಳಿಕೆಗೆ ಪರಿಹಾರ ಸೂತ್ರಗಳು

ಅಯ್ಯೋ, ನನ್ನ ಹೆಂಡತಿಗೆ ನನ್ನ ಕಂಡರೆ ಗೌರವವಿಲ್ಲ, ಮನೆಯಲ್ಲಿ ನನಗೆ ಮರ್ಯಾದೆಯಿಲ್ಲ, ಈ ಹೆಂಗಸರಿಗೆ ಎಷ್ಟು ಮಾಡಿದರೂ ಅಷ್ಟೇ, ನಾನು ಅಂದರೆ ಕಸಕ್ಕಿಂತ ಕಡೆ. ಮನೆಗೆ ಹೋಗುವುದಕ್ಕೆ ಬೇಸರವಾಗುತ್ತದೆ, ಹೀಗೆಲ್ಲಾ ಅಂದುಕೊಳ್ಳೋರು ನೀವಾದರೆ ಈ ಬರಹ ನಿಮಗಾಗಿ!

ಲೇಖಕಿ: ಸಹನಾ ಪ್ರಸಾದ್

ಬೆಂಗಳೂರಿನವರಾದ ಸಹನಾ ಪ್ರಸಾದ್ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ, ಸಂಗೀತ, ವಿವಿಧ ವಿಚಾರಗಳ ಬಗ್ಗೆ ಲೇಖನ, ಅದರಲ್ಲೂ ಹಾಸ್ಯ ಲೇಖನಗಳು ಬರೆಯುವುದು ಇವರ ಹವ್ಯಾಸ. ಸಂಖ್ಯಾಶಾಸ್ತ್ರ ಬಗ್ಗೆ ಇವರು ಬರೆದ ಪುಸ್ತಕಗಳು, ಲೇಖನಗಳು ಜನಪ್ರಿಯವಾಗಿವೆ. ಜತೆಗೆ ವಿಚಾರಗೋಷ್ಠಿಗಳಲ್ಲಿ, ಸೆಮಿನಾರ್ ಗಳಲ್ಲಿ ಇವರು ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು ಬರೆದ ಕಾದಂಬರಿ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. 

"ಅಯ್ಯೋ, ನನ್ನ ಹೆಂಡತಿಗೆ ನನ್ನ ಕಂಡರೆ ಗೌರವವಿಲ್ಲ, ಮನೆಯಲ್ಲಿ ನನಗೆ ಮರ್ಯಾದೆಯಿಲ್ಲ", " ಈ ಹೆಂಗಸರಿಗೆ ಎಷ್ಟು ಮಾಡಿದರೂ ಅಷ್ಟೇ, ನಾನು ಅಂದರೆ ಕಸಕ್ಕಿಂತ ಕಡೆ" , "ಮನೆಗೆ ಹೋಗುವುದಕ್ಕೆ ಬೇಸರವಾಗುತ್ತದೆ, ಅಲ್ಲಿ ನನ್ನ ನೋವನ್ನು ಅರಿತು ಉಪಚರಿಸುವವರು ಯಾರು?" ಈ ಮಾತುಗಳನ್ನು ಗಂಡಂದಿರು ಆಡುವುದನ್ನು ಕೇಳಿರಬಹುದು. 

ಪ್ರೀತಿ, ಗೌರವ ಕೇಳಿ ಪಡೆಯುವಂತಹದ್ದು ಅಲ್ಲ. ಹೃದಯಾಳದಿಂದ ಪ್ರೀತಿ ಉಕ್ಕಿ, ಗೌರವ ತಾನಾಗೇ ಮೂಡಬೇಕು. ಹೆಣ್ಣಿಗೆ ಪ್ರೀತಿ, ಗಂಡಿಗೆ ಗೌರವ ಅತಿ ಆವಶ್ಯಕವೆಂದು ಪರಿಗಣಿಸಲ್ಪಟ್ಟಿದೆ. ದುರಾದೃಷ್ಠವಾತ್ ಹಲವು ಸಂಸಾರಗಳಲ್ಲಿ ಇದು ಕಾಣಸಿಗುವುದಿಲ್ಲ. ಆಗ ಸಂಸಾರದಲ್ಲಿ ಕಷ್ಟ ಕಾಲ , ಪರಸ್ಪರ ಅಪಾರ್ಥ, ದೂಷಣೆ, ಸಿಟ್ಟು, ಮಾತು ಬಿಡುವುದು ಇತ್ಯಾದಿಯಾಗಿ ಮನೆಯ ಶಾಂತಿ, ನೆಮ್ಮದಿ ಹಾಳು.

ನಿರಾಕರಣೆಯ ಖಿನ್ನತೆ

ಗೌರವವೆನ್ನುವುದು ಎಲ್ಲರಿಗೂ ಬೇಕಾದದ್ದು. ಹೆಣ್ಣು ಸ್ವಭಾವತಃ ಕ್ಷಮಾಶೀಲೆ. ತನ್ನ ಗಂಡ ತನ್ನನ್ನು ಅಗೌರವದಿಂದ ಕಂಡಾಗಲೂ, ಸಂಸಾರವನ್ನು ಉಳಿಸುವುದಕ್ಕೆ, ಮಕ್ಕಳ ಯೋಗಕ್ಷೇಮಕ್ಕಾಗಿ, ಆ ನೋವನ್ನು ಮರೆಮಾಚಿ ಬದುಕಬಲ್ಲಳು. ಆದರೆ ಬಹುತೇಕ  ಗಂಡಸರಿಗೆ ಹೆಂಡತಿ ತನ್ನನ್ನು ಗೌರವಿಸುವುದಿಲ್ಲ ಎಂದಾಗ ಮನಸ್ಸು ನಿರಾಕರಣೆಯ ಖಿನ್ನತೆಯನ್ನು ಅನುಭವಿಸುತ್ತದೆ. ಕೋಪ, ರೋಷ ಉಕ್ಕಿ ಬಲವಂತವಾಗಿ ಇದನ್ನು ಗಳಿಸಲು ಯತ್ನಿಸಬಹುದು. 

ಬೇರೆ ಹೆಣ್ಣಿನ  ಸಹವಾಸ, ಕುಡಿತ, ಇತ್ಯಾದಿ ಚಟಗಳಿಗೆ ಬೀಳಬಹುದು. ಭಾವನೆಗಳನ್ನು ತಮ್ಮೊಳಗೆ ಮುಚ್ಚಿಟ್ಟುಕೊಂಡು ಕೊರಗಬಹುದು, ಮಾನಸಿಕವಾಗಿ ಅಥವಾ ದೈಹಿಕವಾಗಿ ಸಂಸಾರದಿಂದ ದೂರವಾಗಿಬಿಡಲೂಬಹುದು. ಅದರ ಬದಲು ಧನಾತ್ಮಕವಾಗಿ ಯೋಚಿಸಿ, ಆತ್ಮಾವಲೋಕನ ಮಾಡಿಕೊಂಡು , ಹೆಂಡತಿಯೊಡನೆ ಮುಕ್ತವಾಗಿ ಚರ್ಚಿಸಿ ಇದನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು.

ಒಳ್ಳೆಯತನದಿಂದ ಒಲಿಸಿಕೊಳ್ಳುವ ಯತ್ನ

ಆತ್ಮಾಭಿಮಾನ ಕಡಿಮೆ ಇರುವ ಗಂಡಸರಿಗೆ ಯಾವಾಗಲೂ ಕೀಳರಿಮೆ ಕಾಡುತ್ತಿರುತ್ತದೆ. ತಮ್ಮ ಬಗ್ಗೆ ಜನ ತಪ್ಪು ತಿಳಿಯುತ್ತಾರೆ, ತಮ್ಮನ್ನು ಕಡಿಮೆ ದರ್ಜೆಯಲ್ಲಿ ಅಳೆಯುತ್ತಾರೆ ಎಂಬುದು ಅವರಿಗೆ ಕೊರಗು. ಇದನ್ನು ದೂರವಾಗಿಸಲು ಪತ್ನಿಯಿಂದ ಯಾವಾಗಲೂ ಉತ್ತೇಜನ, ಪ್ರಶಂಸೆಯನ್ನು ನಿರೀಕ್ಷಿಸುತ್ತಾರೆ. 

ಬೇರೆಯವರು ಕೊಡದ ಮರ್ಯಾದೆ, ಪ್ರಶಂಸೆ, ಮೆಚ್ಚುಗೆ ಹೆಂಡತಿಯಿಂದ ಸಿಗಲಿ ಎಂದು ಅಪೇಕ್ಷಿಸುತ್ತಾರೆ. ಬಲವಂತವಾಗಿಯಾದರೂ ಅದನ್ನು ಪಡೆಯಲೆತ್ನಿಸುತ್ತಾರೆ. ಪತ್ನಿಯಿಂದ  ಗಮನ, ಮಾನ್ಯತೆ, ಅನುಮೋದನೆ, ಗುರುತಿಸುವಿಕೆ, ಸ್ವೀಕಾರ ಹಾಗೂ  ಗೌರವ ಸದಾ ಕಾಲ ಅಪೇಕ್ಷಿಸಿ ಅವಳಿಗೆ ಅದು ಭಾರವೆನಿಸತೊಡಗುತ್ತದೆ. ಇದು ಬಹಳ ಸಮಯ ಮುಂದುವರೆದಾಗ  ಪತ್ನಿಯಾದವಳು ಈ ಒತ್ತಡವನ್ನು ನಿಭಾಯಿಸಲಾಗದೆ ಗಂಡನ ಬಗ್ಗೆ ಗೌರವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ, ಅವನಿಂದ ದೂರ ಸರಿಯುತ್ತಾಳೆ.

ಮುಕ್ತ ಸಂಭಾಷಣೆ ಅತ್ಯಗತ್ಯ

ಹೆಣ್ಣು ತನ್ನಿಂದ ದೂರ ಸರಿಯುವುದು ಅವನ ಅಹಂಗೆ ಮತ್ತಷ್ಟು ಪೆಟ್ಟು ಕೊಟ್ಟು ಅವನ ಆತ್ಮಗೌರವ ಇನ್ನೂ ಕಡಿಮೆ ಆಗುತ್ತಾ ಹೋಗುತ್ತದೆ. ಇದು ವಿಷಮಚಕ್ರವಾಗಿ ಇಬ್ಬರೂ ಬಲಿಯಾಗುತ್ತಾರೆ. ಇದು ಮತ್ತಷ್ಟು ನೋವಿನಲ್ಲಿ ಪರ್ಯಾವಸಾನಗೂಳ್ಳುವುದರ ಮುನ್ನ  ಗಂಡನಾದವನು ಎಚ್ಚೆತ್ತುಕೊಂಡು ತನ್ನಲ್ಲಿರುವ ಕೊರತೆಗಳನ್ನು ಪತ್ತೆ ಹಚ್ಚಬೇಕು. 

ಹೊಸ ಹವ್ಯಾಸಗಳನ್ನು, ಒಳ್ಳೆಯ ಸಹವಾಸಗಳನ್ನು, ಗೆಳೆಯರನ್ನು ಸಂಪಾದಿಸಿ, ಹಣದ ಕೊರತೆಗಳನ್ನು ನಿವಾರಿಸಿಕೊಂಡು ತನ್ನ ಬದುಕನ್ನು ಸಂಭಾಳಿಸಿಕೊಳ್ಳಬೇಕು. ಹೆಂಡತಿಯ ಬರಿ ಮಾತನಾಡುವಾಗ ಪದೇ ಪದೇ ತನ್ನ ಅಸಹಾಯಕ ಪರಿಸ್ಥಿತಿ, ವ್ಯವಹಾರಗಳ ಒತ್ತಡಗಳು, ಹಣದ ಕೊರತೆ, ಬೇರೆಯವರ ದೂರ್ತತನ ಇತ್ಯಾದಿಗಳ ಬಗ್ಗೆಯೇ ಮಾತನಾಡದೆ ಗುಣಾತ್ಮಕವಾಗಿ ಇರುವುದನ್ನು ರೂಢಿಸಿಕೊಳ್ಳಬೇಕು.

ಪತಿ, ಪತ್ನಿಯರ ನಡುವೆ ಇರುವ ಸಂಬಂಧವನ್ನು ಗಟ್ಟಿಗೊಳಿಸಲು ಪ್ರೀತಿ, ಪ್ರೇಮ, ಪ್ರಣಯದ ಜತೆ ಮುಚ್ಚುಮರೆಯಿಲ್ಲದೆ, ತೆರೆದ ಹೃದಯಗಳ ಸಂಭಾಷಣೆ ಅತ್ಯಗತ್ಯ. ಹೆಂಡತಿಯ ಮನಸ್ಸನ್ನು ಅರಿತು, ಅವಳ ಸಕಾರಣವಾದ ದೂರುಗಳಿಗೆ ಮನ್ನಣೆ ನೀಡಿ, ವಿವೇಚನೆಯುಳ್ಳ  ಇಚ್ಛೆಯನ್ನು ಪೂರೈಸಲು ಸಾಧ್ಯವಾದಷ್ಟು ಶ್ರಮಿಸಿದರೆ ಹೆಂಡತಿಯ ಮನಸ್ಸೂ ಹಗೂರವಾಗಿ, ತನ್ನ ಬಾಳನ್ನು ಬೆಳಗಿಸಲು ಯತ್ನಿಸುತ್ತಿರುವ ಗಂಡನಿಗೆ ಆಕೆಗೆ  ಖಂಡಿತ ಮರ್ಯಾದೆ ತನ್ನಂತಾನೆ ಹುಟ್ಟುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT