ಪದ್ಯ ಪರಿಷೆ

ಕವನ ಸುಂದರಿ: ಸ್ಮಿತಾ ಅಮೃತರಾಜ್: ಒಂದು ಖಾಲಿ ಜಾಗ

Harshavardhan M


ಒಂದು ಖಾಲಿ ಜಾಗ

ಎಲ್ಲರ ಬಳಿಯೂ ಎಲ್ಲರೊಳಗೂ
ಇರಬಹುದು ಒಂದೊಂದು ಖಾಲಿ ಜಾಗ. 


ಹಿತ್ತಲಿನಲ್ಲಿಯೋ? ಮುಂದಣ ಅಂಗಳದಲ್ಲಿಯೋ?
ಒಳಕೋಣೆಯೊಳಗೋ? ಅಥವಾ ಯಾವುದೋ
ಅದೃಶ್ಯ ಎಡೆಯಲ್ಲಿ ತೀರಾ ಖಾಸಗಿಯಾಗಿ.  


ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ
ಕುರಿತು ಯೋಚಿಸಿಯೇ ಇರುತ್ತಾರೆ.  


ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ?
ಭತ್ತ ಬೆಳೆಯುವುದಾ?
ತುಸು ಹೆಚ್ಚೇ ಇದ್ದರೆ ಕಟ್ಟಡ ಕಟ್ಟಿಸಿ
ಬಿಕರಿಗಿಡುವುದಾ?
ಅವರವರ ಅನುಕೂಲಕ್ಕೆ ತಕ್ಕ ಹಾಗೆ
ಅಗತ್ಯಕ್ಕೆ ತಕ್ಕ ಹಾಗೆ.


ಇವರೇ ವಾರಸುದಾರರು ಅಂತ
ಬೆಟ್ಟು ಮಾಡಿ ತೋರಿಸಲಾಗದ ಅಸಹಾಯಕತೆಯಲ್ಲಿ
ಖಾಲಿ ಜಾಗವೊಂದು ಅವರಿವರ ಕೈಗೂಸಾಗುತ್ತಲೇ ಸಾಗುತ್ತದೆ
ವ್ಯಾಪಾರ- ವಹಿವಾಟು ಭರದಲ್ಲಿ ಕುದುರುತ್ತದೆ.


ಕಟ್ಟಡವಾದರೆ ಉಸಿರಾಡದೆಯೂ
ಹಲವು ಕಾಲ ಹಾಗೇ ಉಳಿದುಕೊಂಡು ಬಿಡುತ್ತದೆ.
ಬಿತ್ತಿದ್ದು ಬೆಳೆದದ್ದು ಕಾಲಕಾಲಕ್ಕೆ
ಹುಟ್ಟಿ,ಸತ್ತು,ಮರುಹುಟ್ಟು ಪಡೆದು
ಬದಲಾಗುತ್ತಲೇ ಇರುತ್ತದೆ.


ಹಾಗೇ..
ಎಷ್ಟು ಸುಲಭದಲ್ಲಿ ಈ ಖಾಲಿ ಜಾಗಗಳು
ತುಂಬಿಕೊಳ್ಳುತ್ತಲೇ ಬರಿದಾಗುತ್ತವೆ
ಕ್ರಯ-ವಿಕ್ರಯಗಳ ತಕ್ಕಡಿಯೊಳಗೆ
ತೂಗಿಸಿಕೊಂಡೇ ನಿಲ್ಲುತ್ತವೆ.


ಬಹುಕಾಲದಿಂದ ನೋಡುತ್ತಲೇ ಇರುವೆ
ಇಲ್ಲೊಂದು ಅಗೋಚರ ಖಾಲಿ ಸ್ಥಳ
ಹಾಗೇ ಉಳಿದುಕೊಂಡು ಬಿಟ್ಟಿದೆ.
ನಿರಾಕಾರ ಗಾಳಿ ಹೊತ್ತು ತರುವ ಅಪರೂಪದ
ಪರಿಮಳವಷ್ಟೇ ಅಲ್ಲಿ ಸುಳಿದಾಡುತ್ತದೆ.


ಒಂದು ನಿಶ್ಯಬ್ದ ಮಿಡುಕಾಟ
ಕಂಡದ್ದೂ ಕಾಣದ್ದೂ ಎಂದಿಗೂ ದೊರಕದ್ದು ಮಾತ್ರ
ಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.
ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ.


ಕುತೂಹಲವಿದ್ದರೆ, ಒಮ್ಮೆ ಮುಟ್ಟಿ
ಕಣ್ಬಿಟ್ಟು ನೋಡಿಕೊಳ್ಳಿ.
ಆ ಒಂದು ಖಾಲಿ ಜಾಗ ಬಹುಶ: 
ನಿಮ್ಮದೇ ಇರಬಹುದೇನೋ..?



ಕವಯಿತ್ರಿ ಸ್ಮಿತಾ ಅಮೃತರಾಜ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದವರು. ಮಡಿಕೇರಿ ಮತ್ತು ಸುಳ್ಯದಲ್ಲಿ ವಿದ್ಯಾರ್ಜನೆ ಮಾಡಿರುವ ಸ್ಮಿತಾ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ - ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಕಾಲ ಕಾಯುವುದಿಲ್ಲ 'ಅಂಗಳದಂಚಿನ ಕನವರಿಕೆಗಳು' ‘ಒಂದು ವಿಳಾಸದ ಹಿಂದೆ’ ಅವರ ಕೃತಿಗಳು. 

SCROLL FOR NEXT