ನವದೆಹಲಿ: ಏರ್ ಟೆಲ್, ಫೇಸ್ ಬುಕ್ ನಂತರ ಗೂಗಲ್ ಸಂಸ್ಥೆ ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿ ವಿರುದ್ಧ ಲಾಬಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಜೀರೋ ರೇಟಿಂಗ್ ಹಾಗೂ ನೆಟ್ ನ್ಯೂಟ್ರಾಲಿಟಿಯನ್ನು ಪ್ರಚಾರ ಮಾಡುತ್ತಿರುವ ಇಂಟರ್ ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಂಐ) ನ್ನು ಗೂಗಲ್ ನಿಯಂತ್ರಿಸಲು ಯತ್ನಿಸುತ್ತಿದೆ. ಮೀಡಿಯಾನಾಮದ ವರದಿಯ ಪ್ರಕಾರ ಗೂಗಲ್ ನ ಸಾರ್ವಜನಿಕ ನೀತಿ ಹಾಗೂ ಸರ್ಕಾರಿ ಸಂಪರ್ಕ ಅಧಿಕಾರಿಗಳು, ಎಎಂಎಐ ದೂರ ಸಂಪರ್ಕ ಇಲಾಖೆಗೆ ಕಳಿಸುವ ಈ ಮೇಲ್ ನಲ್ಲಿ ಜೀರೋ ರೇಟಿಂಗ್ ಬಗ್ಗೆ ಉಲ್ಲೇಖ ಮಾಡದಂತೆ ತಡೆಗಟ್ಟುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಐಎಎಂಎಐ ನ ಸರ್ಕಾರಿ ಸಂಪರ್ಕ ಸಮಿತಿಗೆ ಈ ಮೇಲ್ ಮೂಲಕ ಪತ್ರ ಬರೆದಿರುವ ಗೂಗಲ್ ನ ಅಧಿಕಾರಿ ವಿನೀತಾ ದೀಕ್ಷಿತ್, ಜಿರೋ ರೇಟಿಂಗ್, ನೆಟ್ ನ್ಯೂಟ್ರಾಲಿಟಿ ಬಗ್ಗೆ ಇಂಟರ್ ನೆಟ್ ಸಂಸ್ಥೆಗಳ ಒಮ್ಮತ ಪಡೆದಿಲ್ಲ ಎಂದು ಆರೋಪಿಸಿದ್ದಾರೆ.
ನೆಟ್ ನ್ಯೂಟ್ರಾಲಿಟಿ ವಿಷಯದ ಬಗ್ಗೆ ಗೂಗಲ್ ಸಂಸ್ಥೆ ಈ ವರೆಗೂ ಟ್ರಾಯ್ ನೊಂದಿಗೆ ಸಮಾಲೋಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ, ಅಂತೆಯೇ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಕೆಲವು ಆಪ್ ಗಳನ್ನು ಜೀರೋ ರೇಟ್ ಮಾಡುವ ಮೂಲಕ ತನ್ನ ಬಳಕೆದಾರರಿಗೆ ಉಚಿತ ಡೇಟಾ ನೀಡುವ ಯೋಜನೆಯನ್ನು ಗೂಗಲ್ ಸಂಸ್ಥೆ ಕೆಲ ತಿಂಗಳ ಹಿಂದೆ ತಡೆಹಿಡಿದಿತ್ತು.