ವಾಷಿಂಗ್ಟನ್ : ಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿ ಮಾಡಲು ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ (NASA) ಚಿಂತನೆ ನಡೆಸಿದೆ. ಮೊದಲಿಗೆ ನಾಸಾ ಮಂಗಳನ ಕೃತಕ ವಾತಾವರಣವನ್ನು ಸೃಷ್ಟಿಸಿ ಅಲ್ಲಿ ಕೃಷಿ ಮಾಡಲು ಸಾಧ್ಯವೇ? ಎಂದು ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಸಫಲವಾದರೆ ಮಾತ್ರ ಮಂಗಳ ಗ್ರಹದಲ್ಲಿ ಆಲೂಗೆಡ್ಡೆ ಕೃಷಿ ಮಾಡಲಾಗುವುದು.
ಭೂಮಿಯಲ್ಲಿನ ಉಷ್ಣತೆ ಹಾಗೂ ಹವಾಮಾನ ವೈಪರೀತ್ಯವನ್ನು ಮನಗಂಡು ಮಂಗಳನ ಅಂಗಳ ಕೃಷಿ ಯೋಗ್ಯವೇ? ಎಂಬುದನ್ನು ಪತ್ತೆ ಹಚ್ಚಲು ಈ ಪರೀಕ್ಷೆ ನಡೆಸಲಾಗುತ್ತದೆ.
ಪೆರುವಿನಲ್ಲಿರುವ ಅಂತಾರಾಷ್ಟ್ರೀಯ ಆಲೂಗೆಡ್ಡೆ ಸಂಶೋಧನಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಪೆರುವಿನ ಕೆಲವು ಪ್ರದೇಶಗಳಲ್ಲಿನ ಮಣ್ಣು ಮಂಗಳ ಗ್ರಹದಲ್ಲಿರುವ ಮಣ್ಣಿನೊಂದಿಗೆ ಸಾಮ್ಯತೆ ಹೊಂದಿರುವ ಕಾರಣ ಪೆರುವಿನಲ್ಲಿ ಈ ಪರೀಕ್ಷೆ ನಡೆಯಲಿದೆ.
ಯಾವುದೇ ಹವಾಮಾನದಲ್ಲಿಯೂ ಬೆಳೆಯುವಂತ ಸಾಮರ್ಥ್ಯ ಆಲೂಗೆಡ್ಡೆಗೆ ಇದೆ. ಮಾತ್ರವಲ್ಲ ಮನುಷ್ಯನಿಗೆ ಅತ್ಯವಶ್ಯಕವಾದ ಕಾರ್ಬೋ ಹೈಡ್ರೇಟ್, ವಿಟಾಮಿನ್ ಸಿ, ಕಬ್ಬಿಣ, ಜಿಂಕ್ ಸೇರಿದಂತೆ ಹಲವಾರು ಪೋಷಕಾಂಶಗಳು ಆಲೂಗೆಡ್ಡೆಯಲ್ಲಿದೆ. ಶೇ. 95ರಷ್ಟು ಕಾರ್ಬನ್ ಡೈ ಆಕ್ಸೈಡ್ ಮಂಗಳ ಗ್ರಹದಲ್ಲಿರುವ ಕಾರಣ ಅದು ಕೃಷಿಗೆ ಯೋಗ್ಯ ಎಂದು ಹೇಳಲಾಗುತ್ತಿದೆ.