ಚೆನ್ನೈ: ಇಸ್ರೋದ ದಾಖಲೆ ಕಿರೀಟಕ್ಕೆ ಇನ್ನೊಂದು ಗರಿ ಸೇರಲಿದೆ. ಇಸ್ರೋ ತನ್ನ ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ವಾಹನ ಸಜ್ಜುಪಡಿಸಿದೆ. ಉಡಾವಣಾ ವಾಹನ ಪಿಎಸ್‍ಎಲ್ ವಿ-ಸಿ28 ಈಗಾಗಲೇ ಐದು ಬ್ರಿಟಿಷ್ ಉಪಗ್ರಹಗಳನ್ನು ತನ್ನಲ್ಲಿಟ್ಟುಕೊಂಡು ಹಾರಲು ಸಜ್ಜಾಗಿದೆ.
ಜು.10ರಂದು ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಪಗ್ರಹಗಳನ್ನು ಉಡಾಯಿಸಲು ಕ್ಷಣಗಣನೆ ಆರಂಭವಾಗಿದೆ. ಪಿಎಸ್‍ಎಲ್ ವಿಯ 30ನೇ ಉಡಾವಣೆ ಇದಾಗಿದ್ದು, ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ದೊಡ್ಡ ವಾಣಿಜ್ಯ ಉಡ್ಡಯನ ಯೋಜನೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಬ್ರಿಟನ್‍ನ ಸರ್ರೆ ಸ್ಯಾಟಲೈಟ್ ಟೆಕ್ನಾಲಜಿ ಲಿಮಿಟೆಡ್ ಮೂರು ಹೆವಿ ಡಿಎಂಸಿ ಉಪಗ್ರಹ, ಒಂದು ಮೈಕ್ರೋ ಹಾಗೂ ಒಂದು ನ್ಯಾನೋ ಉಪಗ್ರಹಗಳನ್ನು ತಯಾರಿಸಿಕೊಟ್ಟಿದ್ದು, ಇದನ್ನು ಪಿಎಸ್‍ಎಲ್ ವಿ-ಸಿ28 ಕಕ್ಷೆಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ಆ್ಯಂಟ್ರಿಕ್ಸ್ ನೊಂದಿಗೆ ಬ್ರಿಟಿಷ್ ಒಪ್ಪಂದವಾಗಿದ್ದು, ಆ ಒಪ್ಪಂದದ ಮೇರೆಗೆ ಇಸ್ರೋ ಈ ಯೋಜನೆಯನ್ನು ಒಪ್ಪಿಕೊಂಡಿದೆ.