ಸ್ಯಾಮಸಂಗ್ ನೋಟ್ 4 ಈಗಾಗಲೇ ಒಂದು ಬದಿ (ಎಡ್ಜ್) ಬಾಗಿರುವ ಸ್ಕ್ರೀನ್ ಹೊಂದಿದೆ. ಈಗ ಎಸ್6 ಎಡ್ಜ್ ಜನನವಾಗಿದೆ. ಎಸ್6 ಎಡ್ಜ್ ನ ಎರಡೂ ಬದಿಗಳು ಬಾಗಿರಲಿವೆ.
ನೋಟ್4ನಲ್ಲಿ ಕೇವಲ ಸ್ಟೈಲ್‍ಗೆ ಅಥವಾ ಆಕರ್ಷಣೆಗೆ ಮಾತ್ರವಲ್ಲ. ಬದಲಾಗಿ ಅದೇ ಸಣ್ಣ ಎಡ್ಜ್ ನಲ್ಲಿಯೇ ಸಾಕಷ್ಟು ಕೆಲಸಗಳನ್ನ ಅಳವಡಿಸಲು ಸ್ಯಾಮಸಂಗ್ ಯಶಸ್ವಿಯಾಗಿತ್ತು. ವಿಶೇಷವಾಗಿ ಭಾರತ ಮತ್ತು ಚೀನಾ ಮಾರುಕಟ್ಟೆಯಲ್ಲಿ ಸ್ಯಾಮಸಂಗ್ ಕಡಿಮೆ ದರದ ಚೀನಾ ಕಂಪನಿಗಳ ಸ್ಮಾರ್ಟ್ ಫೋನ್‍ಗಳಿಂದ ಪೆಟ್ಟು ತಿಂದರೆ, ಅಮೆರಿಕಾ, ಯುರೋಪ್‍ನಂತಹ ಮಾರುಕಟ್ಟೆಯಲ್ಲಿ ಐ ಫೋನ್ 6 ಮತ್ತು 6 ಪ್ಲಸ್‍ನಿಂದ ಭಾರೀ ಪೈಪೋಟಿ ಎದುರಿಸಿದೆ.
ಇದನ್ನು ಮೆಟ್ಟಿ ನಿಲ್ಲಲು ಭಾರತೀಯ ಮಾರುಕ್ಟೆಯಲ್ಲಿ ಸ್ಯಾಮಸಂಗ್ ಈಗಾಗಲೇ ಕಡಿಮೆ ದರದ
ಹಲವು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಪ್ರೀಮಿಯಂ ಹ್ಯಾಂಡ್‍ಸೆಟ್ ಗಳಿಲ್ಲದೆ ಸ್ಯಾಮಸಂಗ್ ಕಂಪನಿ ಲಾಭ ಮಾಡುವುದು ಕಷ್ಟವಿದೆ.
ಈ ಹಿನ್ನೆಲೆಯಲ್ಲಿ ಎಸ್ 6 ಮತ್ತು ಎಸ್ 6 ಎಡ್ಜ್ ಗಳನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಎಸ್6 ಮತ್ತು ಎಸ್5 ಸ್ಕೀನ್ ಒಂದೇ ಆದರೂ ಎಸ್6 ಮೊಬೈಲ್ ಎಸ್5 ಗಿಂತ ತೆಳ್ಳಗೆ ಮತ್ತು ಸಣ್ಣದಾಗಿದೆ. ಎಸ್6 ಎಡ್ಜ್ ಹೆಸರಿಗೆ ತಕ್ಕಂತೆ ಎರಡೂ ಎಡ್ಜ್ ಗಳು ಬಾಗಿವೆ.
ಇನ್ನೊಂದು ಬದಿಯ ಎಡ್ಜ್ ನಲ್ಲಿ ಯಾವ ರೀತಿಯ ಸೌಲಭ್ಯಗಳನ್ನು ಸ್ಯಾಮಸಂಗ್ ಕಲ್ಪಿಸಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇನ್ನೊಂದು ವಿಶೇಷವೆಂದರೆ ಸ್ಯಾಮಸಂಗ್ ಈವರೆಗೆ ಪ್ಲಾಸ್ಟಿಕ್ ಬಾಡಿ ಹೊಂದಿರುವ ಮೊಬೈಲ್‍ಗಳನ್ನು ತಯಾರಿಸುತ್ತಿತ್ತು. ಎಸ್6 ಮತ್ತು ಎಸ್6 ಎಡ್ಜ್ ನಲ್ಲಿ ಏರ್‍ಕ್ರಾಫ್ ಅಲ್ಯುಮೀನಿಯಂ ಫ್ರೇಂ ಬಳಸಲಾಗಿದೆ. ಮುಂಬದಿ ಮತ್ತು ಹಿಂಬದಿಯಲ್ಲಿ ಗೊರಿಲ್ಲಾ ಗ್ಲಾಸ್ ಬಳಸಲಾಗಿದೆ.
ಬಹುಶಃ ಇಂತಹ ಕಾಂಬಿನೇಶನ್ ಹೊಂದಿರುವ ಮೊದಲ ಸ್ಯಾಮಸಂಗ್ ಮೊಬೈಲ್ ಗಳು ಇವಾಗಿವೆ. ಇದರಿಂದ ಮೊಬೈಲ್‍ಗಳು ಗಟ್ಟಿಯಾಗಿರುವ ಜತೆಗೆ, ಸ್ಟೈಲಿಶ್ ಆಗಿಯೂ ಕಾಣುತ್ತಿವೆ. ಎಸ್6ನ ಇನ್ನೊಂದು ವಿಶೇಷವೆಂದರೆ ಇದು ಐಫೋನ್ 6ನ ಕೆಲವು ವಿನ್ಯಾಸಗಳ ಕುರುಹುಗಳನ್ನು ಹೊಂದಿದೆ ಅಥವಾ ನಕಲು ಮಾಡಿದೆ. ಎಸ್5 ಉದ್ದ 142ಎಂಎಂ ಇದ್ದರೆ ಎಸ್6 143ಎಂಎಂ ಉದ್ದವಿದೆ.
ಎಸ್5 ಅಗಲ 73 ಎಂಎಂ ಇದ್ದರೆ, ಎಸ್6 71ಎಂಎಂ, ಎಸ್5 ದಪ್ಪ 8.1 ಎಂಎಂ ಇದ್ದರೆ ಎಸ್6 ಕೇವಲ 6.8 ಎಂಎಂ ದಪ್ಪವಿದೆ. ಎಸ್5 145 ಗ್ರಾಂ ಭಾರವಿದ್ದರೆ, ಎಸ್6138 ಗ್ರಾಂ ಮತ್ತು ಎಸ್6 ಎಡ್ಜ್ 132 ಗ್ರಾಂ ಇವೆ. ಹೊಸ ಮೊಬೈಲ್‍ಗಳು ಕಪ್ಪು, ಬಿಳಿ, ಚಿನ್ನ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರಲಿವೆ. ಎರಡೂಮೊಬೈಲ್ ಗಳು 2ಕೆ ಸ್ಕ್ರೀನ್ ರೆಸಲ್ಯೂಷನ್ ಹಾಗೂ 3ಜಿಬಿ ರ್ಯಾಮ್ ಹೊಂದಿವೆ. 32ಜಿಬಿ, 64ಜಿಬಿ ಮತ್ತು 128 ಜಿಬಿ ಮಾದರಿಯಲ್ಲಿ ಈ ಮೊಬೈಲ್‍ಗಳು ಲಭ್ಯವಿದ್ದು, ಬ್ಯಾಟರಿ ತೆಗೆಯುವ ಅಥವಾ ಬದಲಾಯಿಸುವ, ಮೈಕ್ರೋ ಎಸ್‍ಡಿ ಕಾರ್ಡ್ ಅಳವಡಿಸುವ ಅವಕಾಶ ಇರುವುದಿಲ್ಲ.