ಸ್ಯಾನ್ ಫ್ರಾನ್ಸಿಸ್ಕೋ: ಟ್ವೀಟ್ ಗಳನ್ನು ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ಪ್ರಕಟಿಸಲು ಗೂಗಲ್ ಹಾಗೂ ಟ್ವಿಟರ್ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ.
ಒಪ್ಪಂದದಿಂದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬಂದಿರುವ ಟ್ವೀಟ್ ಗಳನ್ನು ಗೂಗಲ್ ಸರ್ಚ್ ಮೂಲಕ ಪಡೆಯಬಹುದಾಗಿದೆ. ಈ ಹಿಂದೆಯೂ ಗೂಗಲ್ ನಲ್ಲಿ ಟ್ವೀಟ್ ಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿತ್ತು ಆದರೆ 2011 ರ ನಂತರ ಒಪ್ಪಂದ ರದ್ದಾಗಿಗಿತ್ತು. ಗೂಗಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಸರ್ಚ್ ರಿಸಲ್ಟ್ ನಲ್ಲಿ ಟ್ವೀಟ್ ಗಳನ್ನೂ ನೋಡುವುದಕ್ಕೆ ಅತ್ಯಂತ ಉತ್ಸುಕರಾಗಿದ್ದೇವೆ ಎಂದು ಟ್ವಿಟರ್ ನ ಉಪಾಧ್ಯಕ್ಷರು ತಿಳಿಸಿದ್ದಾರೆ.
ಹೊಸ ಯೋಜನೆಯಿಂದಾಗಿ ಟ್ವಿಟರ್ ಗೆ ಅತ್ಯಂತ ಲಾಭವಾಗಲಿದ್ದು, ಕೆಲವೇ ತಿಂಗಳಲ್ಲಿ ಹೆಚ್ಚು ಜನರನ್ನು ತಲುಪುವುದಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಗೂಗಲ್ ನಲ್ಲಿ ಯಾವ ವಿಷಯದ ಬಗ್ಗೆ ಹುಡುಕಲಾಗುತ್ತದೆಯೋ ಆ ವಿಷಯಕ್ಕೆ ಸಂಬಂಧಿಸಿದ ಟ್ವೀಟ್ ಗಳೂ ಅಂತರ್ಜಾಲ ಬಳಕೆದಾರರಿಗೆ ಲಭ್ಯವಾಗಲಿದೆ. ಉದಾಹರಣೆಗೆ ಪಾಪ್ ಗಾಯಕಿ ಟೇಲರ್ ಸ್ವಿಫ್ಟ್ ಹಾಡುಗಳನ್ನು ಹುಡುಕಿದರೆ, ಆಕೆಯ ಇತ್ತೀಚಿನ ಟ್ವೀಟ್ ಗಳ ಬಗ್ಗೆಯೂ ಗೂಗಲ್ ಮಾಹಿತಿ ನೀಡಲಿದೆ.
ಈ ಎರಡೂ ಕಂಪನಿಗಳು 2009 ರಲ್ಲಿ ಇಂತಹದ್ದೇ ಒಪ್ಪಂದಕ್ಕೆ ಸಹಿ ಮಾಡಿದ್ದವು, ಆದರೆ 2011 ಕ್ಕೆ ಒಪ್ಪಂದ ಮುಕ್ತಾಯವಾದ ಹಿನ್ನೆಲೆಯಲ್ಲಿ ಗೂಗಲ್ ನಿಂದ ಟ್ವೀಟ್ ಗಳು ಕಣ್ಮರೆಯಾಗಿದ್ದವು. ಮತ್ತೆ ಒಪ್ಪಂದ ಮಾಡಿಕೊಂಡಿರುವುದರಿಂದ ಟ್ವೀಟ್ ಮಾಡುವವರೂ ಜಾಗತಿಕ ಮಟ್ಟದಲ್ಲಿ ಹೆಚ್ಚು ಜನರನ್ನು ತಲುಪಬಹುದಾಗಿದ್ದು ಟ್ವಿಟರ್ ಜಾಲತಾಣದ ದಟ್ಟಣೆ(internet traffic) ಹೆಚ್ಚಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.