ವಾಷಿಂಗ್ಟನ್: ಬಳಕೆದಾರರ ಸಂದೇಶಗಳನ್ನು ರಹಸ್ಯವಾಗಿಡಲು ವಾಟ್ಸಪ್ ಮೆಸೆಂಜರ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ( ಗೂಢಲಿಪೀಕರಣ) ಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯದಿಂದಾಗಿ ಗ್ರಾಹಕರು ಕಳುಹಿಸುವ ಮತ್ತು ಸ್ವೀಕರಿಸುವ ಸಂದೇಶಗಳನ್ನು ರಹಸ್ಯವಾಗಿಟ್ಟುಕೊಳ್ಳಬಹುದು.
ಪರಸ್ಪರ ಕಳುಹಿಸುವ ಸಂದೇಶಗಳನ್ನು ರಹಸ್ಯವಾಗಿಟ್ಟುಕೊಳ್ಳುವ ಮೂಲಕ ಗೌಪ್ಯತೆ ಕಾಪಾಡಲು ನಾವು ಸಹರಿಸುತ್ತೇವೆ ಎಂದು ವಾಟ್ಸಪ್ ಹೇಳಿದ್ದರೂ, ಇವುಗಳಿಂದ ಸೈಬರ್ ಅಪರಾಧಗಳು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮೆಲ್ಲಾ ಗ್ರಾಹಕರಿಗೆ ಮಂಗಳವಾರ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಸೌಲಭ್ಯವನ್ನು ವಾಟ್ಸಪ್ ಪರಿಚಯಿಸಿತ್ತು. ಈ ಸೌಲಭ್ಯದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದು ಬರುತ್ತಿದ್ದು, ಅಮೆರಿಕ ಆ ಸೌಲಭ್ಯದ ವಿರುದ್ಧ ದನಿಯೆತ್ತಿದೆ.
ವಾಟ್ಸಪ್ ಗೂಢಲಿಪೀಕರಣವನ್ನು ಮಕ್ಕಳ ಪೋರ್ನೋಗ್ರಫಿ ಮತ್ತು ಉಗ್ರರು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚು ಎಂದು ಅಮೆರಿಕ ಹೇಳಿದೆ.
ವಾಟ್ಸಪ್‌ನ ಈ ಎನ್‌ಕ್ರಿಪ್ಶನ್ ನಿಂದಾಗಿ ಮಕ್ಕಳ ಪೊರ್ನೋಗ್ರಫಿ ಮತ್ತು ಉಗ್ರರು ಕಳುಹಿಸುವ ಸಂದೇಶಗಳನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಅಸಾಧ್ಯವಾಗಲಿದೆ. ಈ ಸೌಲಭ್ಯದಿಂದಾಗಿ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವುದು ಕಷ್ಟ.
ತಂತ್ರಜ್ಞಾನದಲ್ಲಿ ಇಂಥಾ ಬೆಳವಣಿಗೆಗಳು ಆಗುತ್ತಲೇ ಇರುತ್ತವೆ. ಇದಕ್ಕೆ ತಕ್ಕಂತೆ ನಾವು ನಮ್ಮ ಕಾನೂನುಗಳನ್ನೂ ಬದಲಿಸಬೇಕಾಗುತ್ತದೆ. ಅಂಥಾ ಆರೋಗ್ಯಕರ ಬೆಳವಣಿಗೆಗಳಿಗೆ ಯಾವತ್ತೂ ಸ್ವಾಗತವಿದ್ದೇ ಇರುತ್ತದೆ ಎಂದು ಅಮೆರಿಕ ಹೇಳಿದೆ.
ಈ ಹಿಂದೆ ಮಕ್ಕಳ ಪೋರ್ನೋಗ್ರಫಿ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ನಾವಿದ್ದೇವೆ ಎಂದು ಫೇಸ್‌ಬುಕ್ -ವಾಟ್ಸಪ್ ಮೆಸೆಂಜರ್‌ನ ಸಂಸ್ಥೆಗಳು ಹೇಳಿದ್ದವು . ಆದರೆ ಈಗ ಗೂಢಲಿಪೀಕರಣ ಸೌಲಭ್ಯವನ್ನು ಒದಗಿಸುವ ಮೂಲಕ ಇಂಥಾ ಹೋರಾಟಗಳನ್ನು ಎದುರಿಸಲು ಸರ್ಕಾರಕ್ಕೆ ಕಷ್ಟವಾಗಲಿದೆ ಎಂಬುದು ಅಮೆರಿಕ ಸರ್ಕಾರದ ವಾದವಾಗಿದೆ.
ವಾಟ್ಸಪ್‌ನ ಈ ಗೂಢಲಿಪೀಕರಣದಿಂದ ಸಂದೇಶಗಳನ್ನು ರಹಸ್ಯವಾಗಿ ವಿನಿಮಯ ಮಾಡಬಹುದಾಗಿದೆ. ಈ ಸಂದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವ ವ್ಯಕ್ತಿಗಳು ಮಾತ್ರ ಓದಬಹುದು. ಯಾವುದೇ ಹ್ಯಾಕರ್‌ಗಾಗಲೀ, ಗುಪ್ತಚರ ಸಂಸ್ಥೆಗಳಿಗಾಗಲೀ ಈ ಸಂದೇಶಗಳನ್ನು ಓದಲು ಆಗುವುದಿಲ್ಲ. ಹೀಗಿರುವಾಗ ಸೈಬರ್ ಅಪರಾಧಗಳಿಗೆ ಇದು ಕುಮ್ಮಕ್ಕು ನೀಡಿದಂತಾಗುತ್ತದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ, ಉಗ್ರ ಕೃತ್ಯಗಳು ಹೆಚ್ಚುತ್ತಿರುವಾಗ ಉಗ್ರರು ಮಾಹಿತಿ ತಂತ್ರಜ್ಞಾನವನ್ನು ಬಳಸಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇಲ್ಲಿ ಉಗ್ರರು ಎನ್‌ಕ್ರಿಪ್ಟೆಡ್ ಸಂದೇಶಗಳನ್ನು ಕಳುಹಿಸಿ ಉಗ್ರ ಕೃತ್ಯಗಳನ್ನು ನಡೆಸಲು ಸಂಚು ಹೂಡಿದರೆ ಆ ಸಂದೇಶವನ್ನು ಯಾವುದೇ ಗುಪ್ತಚರ ಸಂಸ್ಥೆಗಳಿಗಾಗಲೀ, ಹ್ಯಾಕರ್‌ಗಳಿಗಾಗಲೀ ಓದಲು ಸಾಧ್ಯವಿಲ್ಲ. ಇಲ್ಲಿ ಎನ್‌ಕ್ರಿಪ್ಟೆಡ್ ಸೌಲಭ್ಯ ದುರ್ಬಳಕೆಗೊಳಗಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳ ಪೋರ್ನೋಗ್ರಫಿಗೆ ನಿಷೇಧವಿದ್ದರೂ, ಇಂಥಾ ನಿಷೇಧಿತ ಕಾರ್ಯಗಳು ಎನ್‌ಕ್ರಿಪ್ಟೆಡ್ ಸಂದೇಶಗಳ ಮೂಲಕ ಎಗ್ಗಿಲ್ಲದೆ ಸಾಗಬಹುದು!