ನವದೆಹಲಿ: ಮುಂದಿನ ವರ್ಷ ಜನವರಿಯಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಗಳು ಮತ್ತು 2018ರಿಂದ ಮಾರಾಟವಾಗುವ ಮೊಬೈಲ್ ಗಳಲ್ಲಿ ಜಿಪಿಎಸ್ ವ್ಯವಸ್ಥೆಯಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಮಾನವನ ಜೀವನವನ್ನು ಉತ್ತಮಪಡಿಸಲು ತಂತ್ರಜ್ಞಾನ ಉಪಯೋಗವಾಗುತ್ತದೆ. ಅದನ್ನು ಅಪಾಯದಲ್ಲಿರುವ ಅದರಲ್ಲೂ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಸುರಕ್ಷತೆಗೆ ಬಳಸಿದರೆ ಇನ್ನಷ್ಟು ಪ್ರಯೋಜನವಾಗುತ್ತದೆ. ಹಾಗಾಗಿ ಮೊಬೈಲ್ ಫೋನ್ ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು. ಹ್ಯಾಂಡ್ ಸೆಟ್ ಗಳಲ್ಲಿ 5 ಅಥವಾ 9 ಸಂಖ್ಯೆಯನ್ನು ತುರ್ತು ಕರೆಗಳಿಗೆ ಗುರುತುಪಡಿಸಿದರೆ, ಸ್ಮಾರ್ಟ್ ಫೋನ್ ಗಳಲ್ಲಿ ಹ್ಯಾಂಡ್ ಸೆಟ್ ತಯಾರಕರು ತುರ್ತು ಬಟನ್ ಗಳನ್ನು ಗ್ರಾಹಕರಿಗೆ ಒದಗಿಸಬೇಕು. ಅಥವಾ ಪವರ್ ಆನ್/ ಆಫ್ ಬಟನ್ ಗಳನ್ನು ಮೂರು ಬಾರಿ ಒತ್ತಿ ತುರ್ತು ಸಂದೇಶ ಕಳುಹಿಸುವಂತೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿರುವುದಾಗಿ ಕೇಂದ್ರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ ನಲ್ಲಿಯೇ ಈ ನಿಯಮ ಜಾರಿಗೆ ತಂದಿದ್ದರೂ ಆಪಲ್ ನಂತಹ ಕಂಪೆನಿಗಳು ಅದನ್ನು ಜಾರಿಗೆ ತಂದಿರಲಿಲ್ಲ. ಅದಕ್ಕಾಗಿ ಮೊನ್ನೆ 22ರಂದು ಕೇಂದ್ರ ಸರ್ಕಾರ ಪ್ಯಾನಿಕ್ ಬಟನ್ ಅಂಡ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಫೆಸಿಲಿಟಿ ಇನ್ ಮೊಬೈಲ್ ಫೋನ್ ಹ್ಯಾಂಡ್ ಸೆಟ್ ರೂಲ್ಸ್ -2016 ಅಧಿಸೂಚನೆ ಪ್ರಕಟಿಸಿದೆ.
ಇದರ ಉದ್ದೇಶವೆಂದರೆ, ಯಾರಾದರೂ ಅಪಾಯದಲ್ಲಿ ಸಿಲುಕಿ ಹಾಕಿಕೊಂಡಿದ್ದರೆ ತಮ್ಮ ಮೊಬೈಲ್ ನಿಂದ ಪೊಲೀಸರಿಗೆ ಕರೆ ಮಾಡಲು ಕೆಲವೊಮ್ಮೆ ಸಾಧ್ಯವಾಗದಿರಬಹುದು. ಅಂತಹ ಸಂದರ್ಭಗಳಲ್ಲಿ ಬಟನ್ ವೊಂದನ್ನು ಒತ್ತಿದರೆ ಸಾಕು. ಜಿಪಿಎಸ್ ಸಿಸ್ಟಮ್ ನಲ್ಲಿ ಅಪಾಯದಲ್ಲಿರುವ ಮಹಿಳೆ ಎಲ್ಲಿದ್ದಾರೆಂದು ಪೊಲೀಸರಿಗೆ ಕೂಡಲೇ ಮಾಹಿತಿ ಸಿಕ್ಕಿ ತಕ್ಷಣವೇ ಹೋಗಿ ಸಹಾಯ ಮಾಡಬಹುದು. ಇದು ಎಷ್ಟರ ಮಟ್ಟಿಗೆ ಗ್ರಾಹಕ ಸ್ನೇಹಿಯಾಗಿರಬಹುದು ಎಂದು ಕಾದು ನೋಡಬೇಕಷ್ಟೆ.