ವಿಜ್ಞಾನ-ತಂತ್ರಜ್ಞಾನ

ಅಮೆರಿಕದಲ್ಲಿ 2.8 ಮಿಲಿಯನ್ ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯಲಿರುವ ಸ್ಯಾಮ್ ಸಂಗ್

Srinivas Rao BV
ವಾಷಿಂಗ್ ಟನ್: ಗ್ಯಾಲೆಕ್ಸಿ ನೋಟ್ 7 ರ ವೈಫಲ್ಯದಿಂದ ಹೊರಬರುವ ಮುನ್ನವೇ ಅಮೆರಿಕಾದಲ್ಲಿ ಸ್ಯಾಮ್ ಸಂಗ್ ಸಂಸ್ಥೆಯ ಟಾಪ್ ಲೋಡ್ ವಾಷಿಂಗ್ ಮಿಷನ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬರೊಬ್ಬರಿ 2.8 ಮಿಲಿಯನ್ ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.
ಬಳಕೆಯ ಸಂದರ್ಭದಲ್ಲಿ ವಾಷಿಂಗ್ ಮಿಷನ್ ನ ಮೇಲ್ಭಾಗ ಚಾಸಿಸ್ ನಿಂದ ಹೊರಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಬಳಕೆದಾರರಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆ 2011 ರಿಂದ ಈವರೆಗೆ ಉತ್ಪಾದನೆಯಾಗಿರುವ ಟಾಪ್ ಲೋಡ್ ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ. 
"ಸ್ಯಾಮ್ ಸಂಗ್ ಸಂಸ್ಥೆಯ ವಾಷಿಂಗ್ ಮಿಷನ್ ಗಳಲ್ಲಿ ವಾಷರ್ ಗಳಿಂದ ಡ್ರಮ್ ಸಮತೋಲನ ಕಳೆದುಕೊಂಡು, ಹೆಚ್ಚು ಕಂಪನ ಉಂಟಾಗಲಿದೆ. ಪರಿಣಾಮವಾಗಿ ಮೇಲ್ಭಾಗ ಚಾಸಿಸ್ ನಿಂದ ಹೊರಬರುವ ಸಮಸ್ಯೆ ಇದೆ, ಇದರಿಂದಾಗಿ ಬಳಕೆದಾರರಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ" ಎಂದು ಅಮೆರಿಕದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗ ಸಹ ಹೇಳಿದೆ. ಈ ಕಾರಣದಿಂದ 2.8 ಮಿಲಿಯನ್ ನಷ್ಟು ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯುವುದಾಗಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ತಿಳಿಸಿದೆ. ವಾಷಿಂಗ್ ಮಿಷನ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಒಟ್ಟು 733 ಪ್ರಕರಣಗಳು ಬೆಳಕಿಗೆ ಬಂದಿದ್ದು,  ಸ್ಯಾಮ್ ಸಂಗ್ ವಾಪಸ್ ಪಡೆಯುತ್ತಿರುವ ವಾಷಿಂಗ್ ಮಿಷನ್ ಗಳ ಪೈಕಿ 34 ಮಾಡೆಲ್ ಗಳು ಒಳಗೊಂಡಿವೆ. 
SCROLL FOR NEXT