ನವದೆಹಲಿ: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ತನ್ನ ಇತಿಹಾಸದಲ್ಲಿಯೇ ಇದೇ ಮೊಗಲ ಬಾರಿಗೆ ತಾಂತ್ರಿಕ ದೋಷದಿಂದ ಮೊಬೈಲ್ ಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.
ಮೂಲಗಳ ಪ್ರಕಾರ ಸ್ಯಾಮ್ ಸಂಗ್ ನ ನೂತನ ನೋಟ್ 7 ಸರಣಿಯ ಮೊಬೈಲ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮೊಬೈಲ್ ಚಾರ್ಜಿಂಗ್ ಗೆ ಹಾಕಿದ್ದ ವೇಳೆ ಸ್ಫೋಟಗೊಂಡ ಕುರಿತು ವರದಿಗಳು ಕೇಳಿ ಬಂದ ಹಿನ್ನಲೆಯಲ್ಲಿ ವಿಶ್ವಾದ್ಯಂತ ಮಾರಾಟವಾಗಿರುವ ಎಲ್ಲ ನೋಟ್ 7 ಸರಣಿಯ ಮೊಬೈಲ್ ಗಳನ್ನು ಸ್ಯಾಮ್ ಸಂಗ್ ಸಂಸ್ಥೆ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ ಮೊಬೈಲ್ ನಲ್ಲಿನ ತಾಂತ್ರಿಕ ದೋಷ ಸರಿಪಡಿಸಿ ಗ್ರಾಹಕರಿಗೆ ಮೊಬೈಲ್ ಮರು ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸ್ಯಾಮ್ ಸಂಗ್ ಸಂಸ್ಥೆ ಅಧಿಕಾರಿಯೊಬ್ಬರು, ಗ್ರಾಹಕರ ಸುರಕ್ಷತೆಗೆ ಸಂಸ್ಥೆ ಮೊದಲ ಆದ್ಯತೆ ನೀಡಲಿದೆ. ನಮ್ಮ ನಿಷ್ಠಾವಂತ ಗ್ರಾಹಕರನ್ನು ನಿರಾಶೆಗೊಳಿಸಲು ನಮಗಿಷ್ಟವಿಲ್ಲ. ಹೀಗಾಗಿ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗುತ್ತಿರುವ ನೋಟ್ 7 ಸರಣಿಯ ಮೊಬೈಲ್ ಗಳನ್ನು ಹಿಂದಕ್ಕೆ ಪಡೆದು ತಾಂತ್ರಿಕ ದೋಷ ಸರಿಪಡಿಸಿ ಪುನರ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಸ್ತುತ ವಿತರಣೆಯಾಗಿರುವ ಎಲ್ಲ ಮೊಬೈಲ್ ಗಳ ಪೈಕಿ ಶೇ.0.1ರಷ್ಟು ಮೊಬೈಲ್ ಗಳಲ್ಲಿ ಮಾತ್ರ ಬ್ಯಾಟರಿ ಸಮಸ್ಯೆ ಕಂಡುಬಂದಿದ್ದು, ಅದನ್ನು ಶೀಘ್ರದಲ್ಲಿಯೇ ಸರಿಪಡಿಸುವುದಾಗಿ ಅವರು ಹೇಳಿದ್ದಾರೆ. ಅತ್ತ ಸ್ಯಾಮ್ ಸಂಗ್ ಮೊಬೈಲ್ ತಾಂತ್ರಿಕ ದೋಷದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಇತ್ತ ಷೇರುಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಷೇರುಗಳ ಮೌಲ್ಯ ಕುಸಿದಿದೆ.
ಸ್ಯಾಮ್ ಸಂಗ್ ಸಂಸ್ಥೆಯ ಬಹು ನಿರೀಕ್ಷಿತ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಕಳೆದ ಆಗಸ್ಚ್ 2ರಂದು ಬಿಡುಗಡೆಯಾಗಿ, ಆಗಸ್ಟ್ 10 ವಿಶ್ವಾದ್ಯಂತ ಮಾರುಕಟ್ಟೆ ಪ್ರವೇಶಿಸಿತ್ತು. ಇದಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೊಬೈಲ್ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.