ನವದೆಹಲಿ: ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಮೊಬೈಲ್ ಬಳಕೆ ಮೇಲೆ ಹೇರಲಾಗಿದ್ದ ನಿಷೇಧವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಿಂಪಡೆದಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಬ್ಯಾಟರಿಯಲ್ಲಿನ ತಾಂತ್ರಿಕದೋಷದಿಂದಾಗಿ ಮೊಬೈಲ್ ಸ್ಫೋಟಗೊಂಡ ಕುರಿತು ಸುದ್ದಿಗಳು ಹೊರಬಿದ್ದ ಬೆನ್ನಲ್ಲೇ ಕ್ರಮ ಕೈಗೊಂಡಿದ್ದ ಡಿಜಿಸಿಎ ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಬಳಕೆಗೆ ನಿಷೇಧ ಹೇರಿತ್ತು. ಹಬ್ಬದ ಹಿನ್ನಲೆಯಲ್ಲಿ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಸರಣಿಯ ಗ್ಯಾಲಕ್ಸಿ ನೋಟ್ 7 ಮೊಬೈಲ್ ನಲ್ಲಿ ತಾಂತ್ರಿಕ ದೋಷ ಸರಿಪಡಿಸಿರುವ ಕುರಿತು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಡಿಜಿಸಿಎ ನಿಷೇಧ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.
ಆದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು 2016 ಸೆಪ್ಟೆಂಬರ್ 15ರ ಬಳಿಕ ಖರೀದಿಸಿದ ನೋಟ್ 7 ಮೊಬೈಲ್ ಗಳಿಗೆ ಮಾತ್ರ ಬಳಸಬಹುದು ಎಂದು ಡಿಜಿಸಿಎ ಹೇಳಿದೆ. ಸೆಪ್ಟಂಬರ್ 15 ಕ್ಕಿಂತ ಮೊದಲು ಖರೀದಿ ಮಾಡಿದ ನೋಟ್-7 ಫೋನ್ ಗಳಲ್ಲಿ ಬ್ಯಾಟರಿ ದೋಷವಿದ್ದರೆ, ಚಾರ್ಜ್ ಆಗುವ ಸಂದರ್ಭದಲ್ಲಿ ಬಿಳಿ ಬಣ್ಣದ ಲೈಟ್ ಕಂಡು ಬಂದರೆ ವಿಮಾನಗಳಲ್ಲಿ ಕೊಂಡೊಯ್ಯಲು ನಿಷೇಧಿಸಲಾಗಿದೆ. ಸೆಪ್ಟಂಬರ್ 15 ರ ನಂತರದಲ್ಲಿ ಖರೀದಿಸಿದ, ಚಾರ್ಜ್ ಆಗುವಾಗ ಹಸಿರು ಲೈಟ್ ತೋರಿಸುವ ಗ್ಯಾಲಕ್ಸಿ ನೋಟ್-7 ಫೋನ್ ಗಳನ್ನು ವಿಮಾನದಲ್ಲಿ ಕೊಂಡೊಯ್ಯಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ನೀಡಿದೆ.