ದುರ್ಬಲ ಪಾಸ್ವರ್ಡ್ ಹೊಂದುವ ಅಭ್ಯಾಸದಿಂದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಸಾಧ್ಯತೆ ಹೆಚ್ಚು!
ನವದೆಹಲಿ: ಖಾತೆಗಳನ್ನು ರಕ್ಷಿಸಲು ದುರ್ಬಲ ಪಾಸ್ವರ್ಡ್ ಹೊಂದುವ ಅಭ್ಯಾಸದಿಂದ, ಸೂಕ್ಷ್ಮ ಮಾಹಿತಿಗಳ ಸೋರಿಕೆ ಸಾಧ್ಯತೆ ಹೆಚ್ಚು ಎಂದು ಸಂಶೋಧಕರ ತಂಡ ಎಚ್ಚರಿಕೆ ನೀಡಿದೆ.
ರಷ್ಯಾ ಮೂಲದ ಸಾಫ್ಟ್ ವೇರ್ ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ ಕೀ ಪ್ರಯೋಗಾಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಈಗಲೂ ಸಹ ಹಲವು ಜನರು ತಮ್ಮ ಖಾತೆಗಳಿಗೆ ದುರ್ಬಲ ಪಾಸ್ವರ್ಡ್ ನ್ನು ಆಯ್ಕೆ ಮಾಡುವ ಮೂಲಕ ಮಾಹಿತಿ ಸೋರಿಕೆ ಸಾಧ್ಯವಾಗುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.
ದುರ್ಬಲ ಪಾಸ್ವರ್ದ್ ಹೊಂದುವ ಮೂಲಕ ಪಾಸ್ವರ್ಡ್ ನಿರ್ವಹಣೆ ವಿಷಯದಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎಂಬುದು ಹಲವರಿಗೆ ಅರ್ಥವಾಗುತ್ತಿಲ್ಲ ಎಂದು ಕ್ಯಾಸ್ಪರ್ಸ್ ಕೀ ಪ್ರಯೋಗಾಲಯ ಎಚ್ಚರಿಕೆ ನೀಡಿದೆ. ಇದು ದುರ್ಬಲ ಪಾಸ್ವರ್ಡ್ ಗಳ ಕತೆಯಾದರೆ ಹಲವು ಖಾತೆಗಳಿಗೆ ಒಂದೇ ಪಾಸ್ವರ್ಡ್ ಆಯ್ಕೆ ಮಾಡುವುದು ಅಷ್ಟೇ ಅಪಾಯಕಾರಿ ಎನ್ನುತ್ತಿದೆ ಸಂಶೋಧನಾ ತಜ್ಞರ ತಂಡ. ಇಂತಹ ಪ್ರಕರಣಗಳಲ್ಲಿ ಒಂದು ಖಾತೆಯ ಪಾಸ್ವರ್ಡ್ ದೊರೆತರೆ ಎಲ್ಲಾ ಖಾತೆಯ ಪಾಸ್ವರ್ಡ್ ದೊರೆತಂತಾಗಿ, ಏಕಕಾಲಕ್ಕೆ ಎಲ್ಲಾ ಖಾತೆಗಳನ್ನೂ ಹ್ಯಾಕ್ ಮಾಡಬಹುದು ಎಂದು ಕ್ಯಾಸ್ಪರ್ಸ್ ಕೀ ಎಚ್ಚರಿಸಿದೆ.
ಕೇವಲ ಶೇ.47 ರಷ್ಟು ಜನರು ದೊಡ್ಡ ಮತ್ತು ಚಿಕ್ಕ ಅಕ್ಷರಗಳ ಸಂಯೋಜನೆಯನ್ನು ಬಳಸಿ ಪಾಸ್ವರ್ಡ್ ಗಳನ್ನು ಆಯ್ಕೆ ಮಾಡಿದರೆ, ಶೇ.64 ರಷ್ಟು ಜನರು ಅಕ್ಷರ ಹಾಗೂ ಸಂಖ್ಯೆಗಳ ಸಂಯೋಜನೆಯೊಂದಿಗೆ ಪಾಸ್ವರ್ಡ್ ಗಳನ್ನು ಬಳಕೆ ಮಾಡುತ್ತಾರೆ ಎಂದು ಕ್ಯಾಸ್ಪರ್ಸ್ ಕೀ ಹೇಳಿದೆ.