ವಿಜ್ಞಾನ-ತಂತ್ರಜ್ಞಾನ

ಬಿಎಸ್ಎನ್ಎಲ್ ಗೂ ತಟ್ಟಿದ ಮಾಲ್ವೇರ್ ದಾಳಿ ಬಿಸಿ; ಪಾಸ್ವರ್ಡ್ ಬದಲಿಸುವಂತೆ ಗ್ರಾಹಕರಿಗೆ ಸೂಚನೆ

Srinivasamurthy VN

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನ ಸುಮಾರು 2000 ಮಾಡೆಮ್ ಗಳ ಮೇಲೆ ಹ್ಯಾಕರ್ಸ್ ಗಳಿಂದ ಮಾಲ್ವೇರ್ ದಾಳಿಯಾಗಿದ್ದು, ಗ್ರಾಹಕರು ಕೂಡಲೇ ತಮ್ಮ ತಮ್ಮ ಪಾಸ್ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆ ಸೂಚನೆ  ನೀಡಿದೆ.

ಕಳೆದ ವಾರ ಸುಮಾರು 2000ಕ್ಕೂ ಅಧಿಕ ಇಂಟರ್ ನೆಟ್ ಮಾಡೆಮ್ ಗಳ ಮೇಲೆ ಈ ದಾಳಿಯಾಗಿದೆ ಎಂದು ಹೇಳಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಹಕರು ತಮ್ಮ ತಮ್ಮ ಪಾಸ್ವರ್ಡ್ ಗಳನ್ನು ಬದಲಿಸಿಕೊಳ್ಳುವಂತೆ ಸಂಸ್ಥೆ  ಮನವಿ ಮಾಡಿದೆ. "admin" ಎಂಬುದು ಬಿಎಸ್ ಎನ್ ಎಲ್ ಸಂಸ್ಥೆಯ ಡಿಫಾಲ್ಟ್ ಪಾಸ್ವರ್ಡ್ ಆಗಿದ್ದು, ಇಷ್ಟು ಸುಲಭವಾಗಿರುವ ಪಾಸ್ವರ್ಡ್ ಇದೀಗ ಹ್ಯಾಕರ್ಸ್ ಗಳ ದಾಳಿಗೆ ತುತ್ತಾಗಿದೆ. ಸಂಸ್ಥೆಯ ಬಹುತೇಕ ಗ್ರಾಹಕರು ಈ  ಪಾಸ್ವರ್ಡ್ ಅನ್ನು ಬದಲಿಸದೇ ಇರುವುದು ಕಂಡುಬಂದಿದ್ದು, ಇದೇ ಕಾರಣಕ್ಕೆ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಪರಿಸ್ಥಿತಿಯೇನೂ ಕೈಮೀರಿಲ್ಲ. ಸಂಸ್ಥೆಯ ಕೋರ್ ನೆಟ್ವರ್ಕ್ ಗಳ ಮೇಲೆ ದಾಳಿಯಾಗಿಲ್ಲ. ಹೀಗಾಗಿ ಗ್ರಾಹಕರ ಮಾಹಿತಿ ಸುರಕ್ಷಿತವಾಗಿದ್ದು, ಕೂಡಲೇ ಗ್ರಾಹಕರು ತಮ್ಮ ತಮ್ಮ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಗಳನ್ನು  ಬದಲಿಸಿಕೊಳ್ಳಬೇಕು. ಪಾಸ್ವರ್ಡ್ ಬದಲಿಸಿದ ಬಳಿಕ ಗ್ರಾಹಕರು ಚಿಂತೆಗೀಡಾಗುವ ಅಗತ್ಯವಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಅನುಪಮ್ ಶ್ರೀವಾತ್ಸವ್ ಹೇಳಿದ್ದಾರೆ.

ಮಾಲ್ವೇರ್ ದಾಳಿ ವೇಳೆ ಹ್ಯಾಕರ್ಸ್ ಗಳು ಪಾಸ್ವರ್ಡ್ ಗಳನ್ನು ಬದಲಿಸುವ ಸಾಧ್ಯತೆ ಇರುತ್ತದೆ. ಇದರಿಂದ ಗ್ರಾಹಕರು ಮಾಡೆಮ್ ಗಳು ಮೂಲಕ ಲಾಗಿನ್ ಆಗುವುದು ಅಸಾಧ್ಯ. ಹೀಗಾಗಿ ಈಗಲೂ  admin ಅನ್ನು ಪಾಸ್ವರ್ಡ್ ಆಗಿ  ಬಳಕೆ ಮಾಡುತ್ತಿರುವ ಗ್ರಾಹಕರು ಕೂಡಲೇ ಪಾಸ್ವರ್ಡ್ ಬದಲಿಸಬೇಕು ಎಂದು ಶ್ರೀವಾತ್ಸವ್ ಸಲಹೆ ನೀಡಿದ್ದಾರೆ. ಅಂತೆಯೇ ದಾಳಿಯಾಗುತ್ತಿದ್ದಂತೆಯೇ ಸಂಸ್ಥೆಯ ಕಾಲ್ ಸೆಂಟರ್ ಮೂಲಕ ಎಲ್ಲ ಗ್ರಾಹಕರಿಗೂ ಮುನ್ನೆಚ್ಚರಿಕಾ  ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಶ್ರೀವಾತ್ಸವ್ ಹೇಳಿದ್ದಾರೆ.

SCROLL FOR NEXT