ವಿಜ್ಞಾನ-ತಂತ್ರಜ್ಞಾನ

ಕನಸು ನನಸಾಗುವ ಘಳಿಗೆ ಸಮೀಪ; ಮಾನವ ಸಹಿತ ರಾಕೆಟ್ ಜಿಎಸ್ಎಲ್ ವಿ-ಮಾರ್ಕ್-3 ಉಡಾವಣೆಗೆ ಇಸ್ರೋ ಸಜ್ಜು!

Srinivasamurthy VN

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಮೈಲುಗಲ್ಲಿಗೆ ಸಿದ್ಧತೆ ನಡೆಸಿಕೊಂಡಿದ್ದು, ಅಂತರಿಕ್ಷಕ್ಕೆ ಮಾನವರನ್ನು ಸಾಗಿಸಬಲ್ಲ ಬೃಹತ್ ಜಿಎಲ್ ವಿ-ಮಾರ್ಕ್-3 ರಾಕೆಟ್ ಅನ್ನು  ಸಿದ್ಧಪಡಿಸಿದೆ.

ಭಾರತೀಯರನ್ನು ಭಾರತೀಯ ನೆಲದಿಂದಲೇ ಅಂತರಿಕ್ಷಕ್ಕೆ ಕೊಂಡೊಯ್ಯುವ ರಾಕೆಟ್ ಅನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು, ಇದೇ ಜೂನ್ ಮೊದಲ ವಾರದಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದೆ. ಸರಿ  ಸುಮಾರ 200 ಆನೆಗಳಷ್ಟು ಅಂದರೆ  640 ಟನ್ ತೂಕದ (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌)  ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಇಸ್ರೊ ಈ ವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ಮತ್ತು ಬೃಹತ್ ರಾಕೆಟ್‌ ಎಂಬ ಖ್ಯಾತಿಗೆ ಒಳಗಾಗಿದೆ.



ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೂ ಇದೇ ರಾಕೆಟ್‌ ಬಳಕೆಯಾಗಲಿದ್ದು, ಪ್ರಾಯೋಗಿಕವಾಗಿ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಭರದ  ಸಿದ್ಧತೆಯಲ್ಲಿ ತೊಡಗಿದೆ. ಅಂತೆಯೇ ಚೊಚ್ಚಲ ಮಾನವಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿಯ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿಕೊಳ್ಳುತ್ತಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ಈ ರಾಕೆಟ್‌ 4 ಸಾವಿರ ಕೆಜಿ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿರುವ ಐದು ಜಂಬೋಜೆಟ್‌  ವಿಮಾನಗಳಿಗೆ ಈ ತೂಕ ಸಮ ಎಂಬುದು ಗಮನಾರ್ಹ.  ಈ ರಾಕೆಟ್‌ ನಿರ್ಮಾಣಕ್ಕೆ 300 ಕೋಟಿ ರು. ವೆಚ್ಚವಾಗಿದೆಯಾದರೂ, ಭಾರತದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲಿನ ಅವಲಂಬನೆ  ತಪ್ಪುವುದರಿಂದ ಅಷ್ಟೇ ಮೊತ್ತ ಉಳಿತಾಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದೇ ಆದರೆ ಅಂತರಿಕ್ಷಕ್ಕೆ ಮಾನವ ಸಹಿತ ರಾಕೆಟ್ ಉಡಾಯಿಸುವ ಸಾಮರ್ಥ್ಯ ಇರುವ ಪ್ರತಿಷ್ಠಿತ ರಾಷ್ಟ್ರಗಳ ಸಮೂಹಕ್ಕೆ ಭಾರತ ಸೇರ್ಪಡೆಯಾಗಲಿದೆ.

SCROLL FOR NEXT